ನವದೆಹಲಿ, ಡಿ.22(DaijiworldNews/AA): ಬಿ.ಆರ್ ಅಂಬೇಡ್ಕರ್ ಹೆಸರಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸ್ವಾರ್ಥ ರಾಜಕಾರಣ ಮಾಡುತ್ತಿವೆ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ರಾಷ್ಟ್ರೀಯ ಅಧ್ಯಕ್ಷೆ ಹಾಗೂ ಉತ್ತರ ಪ್ರದೇಶದ ಮಾಜಿ ಸಿಎಂ ಮಾಯಾವತಿ ಇಂದು ಆರೋಪಿಸಿದ್ದಾರೆ.
ಈ ಬಗ್ಗೆ ಮಾತನಾಡಿತ ಅವರು, ಡಾ. ಬಿ.ಆರ್. ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗಳ ಕುರಿತು ಜನರಲ್ಲಿ ಆಕ್ರೋಶವಿದೆ. ಕಾಂಗ್ರೆಸ್ ಯಾವಾಗಲೂ ಅಂಬೇಡ್ಕರ್ ಅವರನ್ನು 'ನಿರ್ಲಕ್ಷಿಸಿದೆ' ಎಂದು ಹೇಳಿದರು.
ಕಾಂಗ್ರೆಸ್ನ ನಿಲುವು 'ಶುದ್ಧ ವಂಚನೆ' ಮತ್ತು 'ಸ್ವಾರ್ಥದ ರಾಜಕಾರಣ'. ಎಲ್ಲಾ ಪಕ್ಷಗಳು ಬಿಎಸ್ಪಿಯನ್ನು ಕೆಡಿಸಲು ಮತ್ತು ಬಿ.ಆರ್ ಅಂಬೇಡ್ಕರ್ ಅವರ ಘನತೆಗೆ ಧಕ್ಕೆ ತರುವ ಷಡ್ಯಂತ್ರದಲ್ಲಿ ತೊಡಗಿವೆ ಎಂದು ತಿಳಿಸಿದರು.
ಅಂಬೇಡ್ಕರ್ ಕುರಿತ ಹೇಳಿಕೆಗೆ ಅಮಿತ್ ಶಾ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಡಿಸೆಂಬರ್ 24ರಂದು ದೇಶಾದ್ಯಂತ ಬಿಎಸ್ಪಿ ಪ್ರತಿಭಟನೆ ನಡೆಸಲಿದೆ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಈ ಹಿಂದೆ ಎಚ್ಚರಿಕೆ ನೀಡಿದ್ದರು.