ಗುರುವಾಯೂರು, ಜೂ 8 (Daijiworld News/MSP): ಉಡುಪಿಯಾಗಲಿ, ಗುರುವಾಯೂರು ಅಥವಾ ದ್ವಾರಕಾದೊಂದಿಗೆ ಗುಜರಾತ್ ಜನತೆ ಭಾವನಾತ್ಮಕ ನಂಟು ಹೊಂದಿದ್ದಾರೆ. ಇನ್ನು ನನಗೆ ವಾರಣಾಸಿಯಷ್ಟೇ ’ಕೇರಳ ’ ಕೂಡಾ ಮನಸ್ಸಿಗೆ ಆಪ್ತವಾದದ್ದು ಎಂದು ಪ್ರಧಾನಿ ಮೋದಿ ಶನಿವಾರ ಹೇಳಿದ್ದಾರೆ.
ಶನಿವಾರ ಬೆಳಗ್ಗೆ ಕೇರಳದ ಗುರುವಾಯೂರು ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿ ಪೂಜೆ ಸಲ್ಲಿಸಿದ ಬಳಿಕ 'ಕೇರಳ ರಾಜ್ಯ ಬಿಜೆಪಿ ಸಮಿತಿ' ಏರ್ಪಡಿಸಿರುವ ಅಭಿನಂದನಾ ಸಭೆಯಲ್ಲಿ ಭಾಗವಹಿಸಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಕೃಷ್ಣನಗರಿ ಉಡುಪಿ, ಗುರುವಾಯೂರು, ಅಥವಾ ದ್ವಾರಕಾವಿರಲಿ ಗುಜರಾತ್ ಜನತೆ ಭಾವನಾತ್ಮಕ ನಂಟು ಹೊಂದಿದ್ದಾರೆ. ಕೆಲವು ರಾಜಕೀಯ ಪಂಡಿತರು ಕೇರಳದಲ್ಲಿ ಖಾತೆ ತೆರೆಯಲು ಸಾಧ್ಯವಾಗಿಲ್ಲ ಎಂದು ವಿಶ್ಲೇಷಣೆ ಮಾಡುತ್ತಿದ್ದಾರೆ. ಆದರೆ ಅವರಿಗೆ ನಾನು ಉತ್ತರಿಸುವುದಿಷ್ಟೇ, ನಮ್ಮ ನೆಲದ ಜನತೆಗೆ ಧನ್ಯವಾದ ಸಲ್ಲಿಸಲು ಇಲ್ಲಿಗೆ ಬಂದಿದ್ದೇನೆ. ಚುನಾವಣೆ ವೇಳೆ ಮಾತ್ರವಲ್ಲ ಚುನಾವಣೆ ಬಳಿಕವೂ ನಾವು ನಮ್ಮ ಜವಾಬ್ದಾರಿ ಮುಂದುವರೆಸಬೇಕಾಗಿದೆ. 130 ಕೋಟಿ ಜನರು ನಮ್ಮನ್ನು ಆರಿಸಿರುವಾಗ ಅವರ ಸೇವೆಗಾಗಿ ನಾವು ಸಿದ್ಧರಿದ್ದೇವೆ. ನಾವು ರಾಜಕೀಯ ಮಾಡಿರುವುದು ಕೇವಲ ಸರ್ಕಾರ ರಚನೆಗಾಗಿ ಮಾತ್ರ ಅಲ್ಲ. ದೇಶದ ನಿರ್ಮಾಣಕ್ಕಾಗಿ ಎನ್ನುವುದು ನೆನಪಿರಲಿ ಎಂದರು.
ಇದೇ ವೇಳೆ ಕೇರಳದಲ್ಲಿ ನಿಫಾ ಮಹಾಮಾರಿ ಬಾಧಿಸಿದ್ದು ಇದರ ವಿರುದ್ದ ಹೋರಾಡಲು ಕೇಂದ್ರ ಸರ್ಕಾರ ಕೇರಳದೊಂದಿಗೆ ನಿಂತು ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.