ಬೆಂಗಳೂರು, ಜೂ 8 (Daijiworld News/MSP): ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಸಮ್ಮಿಶ್ರ ಸರಕಾರ ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿರುವ ಮೈತ್ರಿ ಪಕ್ಷಗಳು ಇದೀಗ ಸಂಪುಟ ವಿಸ್ತರಣೆಗೆ ನಿರ್ಧರಿಸಿವೆ. ಇದಕ್ಕಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದು ರಾಜ್ಯಪಾಲ ವಿ.ಆರ್.ವಾಲಾ ಅವರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆಗೆ ಸಮಯ ನೀಡುವಂತೆ ಮನವಿ ಮಾಡಿದ್ದಾರೆ.
ಮೈತ್ರಿ ಸರ್ಕಾರದಲ್ಲಿ ಸದ್ಯ ಖಾಲಿ ಇರುವ ಮೂರು ಸ್ಥಾನಗಳಿಗೂ ಸಚಿವರನ್ನು ನೇಮಿಸಲು ಜೂ.12 ರಂದು ಸಂಪುಟ ವಿಸ್ತರಣೆ ನಡೆಯಲಿದೆ. ಖಾಲಿ ಇರುವ ಸಚಿವ ಸ್ಥಾನಗಳಿಗೆ ಪಕ್ಷೇತರರಿಗೆ ಅವಕಾಶ ನೀಡಲಿದ್ದಾರೆ ಎಂದು ತಿಳಿದುಬಂದಿದ್ದು, ಬುಧವಾರ ಬೆಳಿಗ್ಗೆ 11.30 ಕ್ಕೆ ಸಂಪುಟ ವಿಸ್ತರಣೆ ನಡೆಯಲಿದೆ.
ಈ ಸಂಬಂಧ ಟ್ವಿಟರ್ನಲ್ಲಿ ಮಾಹಿತಿ ನೀಡಿದ ಸಿಎಂ ಕುಮಾರಸ್ವಾಮಿ ಬುಧವಾರ ಜೂನ್ 12ರಂದು ಸಂಪುಟ ವಿಸ್ತರಣೆಯಾಗಲಿದ್ದು, ನೂತನ ಸಚಿವರು ಪ್ರಮಾಣ ವಚನ ಬೋಧಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಬರೋಬ್ಬರಿ ಮೈತ್ರಿ ಸರಕಾರಕ್ಕೆ ಒಂದು ವರ್ಷ ತುಂಬಿದ ಬಳಿಕ ಮತ್ತೆ ಸಂಪುಟ ವಿಸ್ತರಣೆಯಾಗುತ್ತಿದೆ. ಮೂವರು ಶಾಸಕರಿಗೆ ರಾಜಭವನದಲ್ಲಿ ರಾಜ್ಯಪಾಲರು ಪ್ರಮಾಣ ವಚನ ಬೋಧಿಸಲಿದ್ದಾರೆ. ಮೂವರು ಸಚಿವರು ಯಾರು ಎಂದು ಗೌಪ್ಯತೆ ಕಾಪಾಡಿಕೊಳ್ಳಲಾಗಿದ್ದು, ಮೂಲಗಳ ಪ್ರಕಾರ ರಾಮಲಿಂಗಾ ರೆಡ್ಡಿ, ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ಮತ್ತು ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಎಂದು ಅಂದಾಜಿಸಲಾಗಿದೆ.