ಬೆಂಗಳೂರು, ಜೂ08(Daijiworld News/SS): ಇನ್ನೇನಿದ್ದರೂ ಮಂಡ್ಯಕ್ಕೆ ತೆರಳಿ ಅಲ್ಲಿನ ಜನರ ಸೇವೆ ಮಾಡುವುದೇ ನನ್ನ ಮುಂದಿನ ದಾರಿ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದರು.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನಕ್ಕೆ ಆಗಮಿಸಿದ್ದ ಸುಮಲತಾ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಲೋಕಸಭಾ ಚುನಾವಣೆಯಲ್ಲಿ ಯಾರೆಲ್ಲ ಬೆಂಬಲಿಸಿದ್ದಾರೆಯೋ ಅವರಿಗೆಲ್ಲ ಕೃತಜ್ಞತೆ ಹೇಳುವುದು ನನ್ನ ಕರ್ತವ್ಯ. ಆದ್ದರಿಂದ ನಾನು ಬಿಜೆಪಿ ಕಚೇರಿಗೆ ಆಗಮಿಸಿದ್ದೇನೆ ಎಂದು ತಿಳಿಸಿದರು.
ಬಿ ಎಲ್ ಸಂತೋಷ್ ಅವರು ನನಗೆ ಮೊದಲು ಸಿಕ್ಕಿರಲಿಲ್ಲ. ಆದ್ದರಿಂದ ಇಂದು ಅವರನ್ನು ಭೇಟಿ ಮಾಡಿ ಕೃತಜ್ಞತೆ ಅರ್ಪಿಸಿದ್ದೇನೆ. ಬೆಂಬಲಿಸಿದವರಿಗೆ ಕೃತಜ್ಞತೆ ಹೇಳುವುದು ನನ್ನ ಕರ್ತವ್ಯವಾಗಿತ್ತು. ಆದ್ದರಿಂದ ಇಲ್ಲಿಗೆ ಆಗಮಿಸಿದ್ದೇನೆ ಎಂದು ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಬೆಂಬಲಿಸುವಂತೆ ಬಿಜೆಪಿಯೇನು ನನ್ನ ಕೇಳಿಲ್ಲ. ಈ ಬಗ್ಗೆ ನಾನೂ ಯೋಚಿಸಿಲ್ಲ. ಇನ್ನೇನಿದ್ದರೂ ಮಂಡ್ಯಕ್ಕೆ ತೆರಳಿ ಅಲ್ಲಿನ ಜನರ ಸೇವೆ ಮಾಡುವುದೇ ನನ್ನ ಮುಂದಿನ ದಾರಿ ಎಂದು ತಿಳಿಸಿದ್ದಾರೆ.