ಬೆಂಗಳೂರು, ಜೂ 8 (Daijiworld News/MSP): ಕೊನೆಗೂ ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆಗೆ ದಿನ ನಿಗದಿಯಾಗಿದೆ. ಆದರೆ ಅತ್ತಕಡೆ ಸಂಪುಟ ವಿಸ್ತರಣೆಗೆ ಮೂಹೂರ್ತ ಫಿಕ್ಸ್ ಆಗುತ್ತಿದ್ದಂತೆ ಸಚಿವ ಸ್ಥಾನ ಆಕಾಂಕ್ಷಿಗಳ ಅಸಮಾಧಾನವೂ ಹೆಚ್ಚಾಗುವ ಲಕ್ಷಣ ಕಂಡುಬರುತ್ತಿದೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದು ರಾಜ್ಯಪಾಲ ವಿ.ಆರ್.ವಾಲಾ ಅವರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆಗೆ ಸಮಯ ನೀಡುವಂತೆ ಮನವಿ ಮಾಡಿದ್ದು, ಜೂನ್ 12 ರ ಬುಧವಾರ ಮೂವರು ಶಾಸಕರಿಗೆ ರಾಜಭವನದಲ್ಲಿ ರಾಜ್ಯಪಾಲರು ಪ್ರಮಾಣ ವಚನ ಬೋಧಿಸಲಿದ್ದಾರೆ. ಮೂವರು ಸಚಿವರು ಯಾರು ಎಂದು ಗೌಪ್ಯತೆ ಕಾಪಾಡಿಕೊಳ್ಳಲಾಗಿದ್ದು, ಮೂಲಗಳ ಪ್ರಕಾರ ರಾಮಲಿಂಗಾ ರೆಡ್ಡಿ, ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ಮತ್ತು ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಅವರು ಸಚಿವರಾಗುವ ಸಾಧ್ಯತೆ ಹೆಚ್ಚಿದೆ. ಕಾಂಗ್ರೆಸ್ ಶಾಸಕ ಬಿ,ಸಿ ಪಾಟೀಲ್ ಗೆ ಸಚಿವ ಸ್ಥಾನ ನೀಡಲಾಗುತ್ತೆಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಬಿ.ಸಿ ಪಾಟೀಲ್ ಗೆ ಸ್ಥಾನ ನೀಡಿದರೇ ಮತ್ತೆ ಅಸಮಾಧಾನ ಭುಗಿಲೇಳಬಹುದು ಎಂಬ ಕಾರಣದಿಂದಾಗಿ ಹಿರೆಕೆರೂರು ಬಿ.ಸಿ ಪಾಟೀಲ್ ಅವರನ್ನು ಕೈ ಬಿಡಲಾಗಿದೆ.
ಆದರೆ ಈ ಬಗ್ಗೆ ಸುಳಿವು ಸಿಕ್ಕಿರುವ ಬಿ,ಸಿ ಪಾಟೀಲ್ ಪಕ್ಷದ ವಿರುದ್ದ ಸಿಡಿದೆದ್ದಿದ್ದಾರೆ. ಪದೇ ಪದೇ ಮಂತ್ರಿ ಸ್ಥಾನ ನೀಡುವ ಭರವಸೆ ನೀಡಿ ಬಳಿಕ ನನ್ನನ್ನು ಮೂಲೆಗುಂಪು ಮಾಡಲಾಗುತ್ತದೆ. ಪಕ್ಷದ ಈ ರೀತಿಯ ವರ್ತನೆಯಿಂದ ನನಗೆ ಅವಮಾನವಾಗಿದೆ. ಕಾಂಗ್ರೆಸ್ ನ ನಾಯಕರು ಕ್ಷಣಕ್ಕೊಂದು ಹೇಳಿಕೆ ನೀಡುತ್ತಾರೆ. ಜಮೀರ್ ಅಹ್ಮದ್,ಸಿದ್ದರಾಮಯ್ಯ ಮುಂತಾದವರು ನನ್ನನ್ನು ಕರೆದು ಸಚಿವ ಸ್ಥಾನ ನೀಡಲಾಗುವುದು ಎಂದಿದ್ದರು. ಇನ್ನು ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಭೇಟಿ ಮಾಡಿ ಮಂತ್ರಿ ಸ್ಥಾನ ಫಿಕ್ಸ್ ಎಂದರು . ಆದರೆ ಹೇಳಿದಂತೆ ಯಾವುದು ಮಾಡುತ್ತಿಲ್ಲ. ಇವರೆಲ್ಲಾ ಏನು ಮಕ್ಕಳಾಟ ಆಡುತ್ತಿದ್ದಾರೆಯೇ ಎಂದು ತಮ್ಮ ಪಕ್ಷದ ನಾಯಕರ ವಿರುದ್ದವೇ ಬಿ.ಸಿ ಪಾಟೀಲ್ ಕಿಡಿಕಾರಿದರು.
ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ನನಗೆ ವರಿಷ್ಠರು ಮೋಸ ಮಾಡಿದ್ದಾರೆ ಈಗಾಗಲೇ ಸಾಕಷ್ಟು ಅವಮಾನ ಮಾಡಿದ್ದಾರೆ. ಇನ್ನು ಸಂಪುಟ ಸೇರಬಾರದು ಎಂದು ನಾನೇ ನಿರ್ಣಯ ಮಾಡಿದ್ದೇನೆ, ಇನ್ನು ಮುಂದೆಯೂ ಸಚಿವ ಸ್ಥಾನ ಬೇಡುವುದಿಲ್ಲ, ಯಾರ ಮನೆ ಬಾಗಿಲಿಗೂ ಹೋಗುವುದಿಲ್ಲ, ಅವರೇ ಬಂದರೂ ಒಪ್ಪಿಕೊಳ್ಳುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.