ತ್ರಿಪುರಾ,ಜೂ.ಜೂ08(DaijiWorldNews/AZM): 2047ರವರೆಗೂ ಬಿಜೆಪಿಯೇ ಕೇಂದ್ರದಲ್ಲಿ ಆಡಳಿತ ನಡೆಸಲಿದೆ ಮತ್ತು ಪ್ರಧಾನಿಯಾಗಿ ನರೇಂದ್ರ ಮೋದಿ ಕಾಂಗ್ರೆಸ್ನ ದಾಖಲೆ ಮುರಿಯಲಿದ್ದಾರೆ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ತಿಳಿಸಿದ್ದಾರೆ.
ಈ ಕುರಿತು ತ್ರಿಪುರಾದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯತೆ ಎಂಬುದು ಬಿಜೆಪಿಯ ಡಿಎನ್ಎಯಲ್ಲೇ ಇದೆ. ಇದು ಬಿಜೆಪಿಯ ಅಸ್ಮಿತೆಯಾಗಿದೆ. ಚುನಾವಣೆ ಇರಲಿ, ಇಲ್ಲದಿರಲಿ, ಬಿಜೆಪಿಯೆಂದರೆ ರಾಷ್ಟ್ರೀಯತೆ, ರಾಷ್ಟ್ರೀಯತೆ ಎಂದರೆ ಬಿಜೆಪಿ ಎಂದು ನುಡಿದರು. ನವಭಾರತ ನಿರ್ಮಿಸಲಿರುವ ಪ್ರಧಾನಿ ಮೋದಿಯವರ ಮೇಲೆ ವಿಶ್ವಾಸವಿಟ್ಟು ಬಿಜೆಪಿಗೆ ಮತ ಚಲಾಯಿಸಿದ ಮತದಾರರಿಗೆ ಅಭಿನಂದನೆ ಸಲ್ಲಿಸಿದ ಅವರು, 2022ರ ವೇಳೆ ನಾವು ನಿರ್ಮಿಸುವ ನವಭಾರತದಲ್ಲಿ ಎಲ್ಲರಿಗೂ ಉದ್ಯೋಗ ಹಾಗೂ ಎಲ್ಲರಿಗೂ ವಸತಿ ದೊರಕಲಿದೆ ಎಂದರು.
ಸ್ವತಂತ್ರ ಭಾರತದ ಚರಿತ್ರೆಯಲ್ಲೇ ದೀರ್ಘಾವಧಿ ಅಧಿಕಾರದಲ್ಲಿದ್ದ ಪಕ್ಷವೆಂದರೆ ಕಾಂಗ್ರೆಸ್. ಆ ಪಕ್ಷ 1950ರಿಂದ 1977ರವರೆಗೆ ನಿರಂತರವಾಗಿ ಆಡಳಿತ ನಡೆಸಿತ್ತು. ಮೋದಿಯವರು ಈ ದಾಖಲೆಯನ್ನು ಮುರಿಯುತ್ತಾರೆ ಎಂದು ರಾಮಮಾಧವ್ ವಿಶ್ವಾಸ ವ್ಯಕ್ತಪಡಿಸಿದರು.