ಕೊಲ್ಕತ್ತಾ,ಜೂ 09(DaijiWorldNews/AZM): ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಸಂಘರ್ಷದಲ್ಲಿ ಕನಿಷ್ಠ ಮೂರು ಮಂದಿ ಬಲಿಯಾಗಿರುವ ಘಟನೆ ಪಶ್ಚಿಮ ಬಂಗಾಲದ ಉತ್ತರ 24 ಪರಗಣಾ ಜಿಲ್ಲೆಯಲ್ಲಿ ನಡೆದಿದೆ.
ಮೃತಪಟ್ಟವರಲ್ಲಿ ಒಬ್ಬರು ಟಿಎಂಸಿ ಕಾರ್ಯಕರ್ತ ಹಾಗೂ ಇಬ್ಬರು ಬಿಜೆಪಿ ಕಾರ್ಯಕರ್ತರಾಗಿದ್ದಾರೆ.
ನಯ್ಜೋತ್ ಎಂಬಲ್ಲಿನ ಸಂದೇಶಖಾಲಿ ಪ್ರದೇಶದಲ್ಲಿ ಶನಿವಾರ ಸಂಜೆ 7ರ ಬಳಿಕ ಹಾತ್ಗಂಚಾ ಪಂಚಾಯತ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳಿಂದ ಪಕ್ಷಗಳ ಧ್ವಜಗಳನ್ನು ತೆಗೆಯುವ ಸಂದರ್ಭದಲ್ಲಿ ಘರ್ಷಣೆ ಆರಂಭವಾಯಿತು ಎನ್ನಲಾಗಿದೆ.
ಪರಿಸ್ಥಿತಿ ತಿಳಿಗೊಳಿಸಲು ಭಾರಿ ಪ್ರಮಾಣದಲ್ಲಿ ಪೊಲೀಸ್ ಪಡೆ ನಿಯೋಜಿಸಲಾಗಿದೆ. ಬಶೀರ್ಹತ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಈ ಪ್ರದೇಶದಲ್ಲಿ ತೃಣಮೂಲ ಕಾಂಗ್ರೆಸ್ ವಿರುದ್ಧ ಬಿಜೆಪಿ 144 ಮತಗಳ ಮುನ್ನಡೆ ಸಾಧಿಸಿತ್ತು. ಆದರೆ ತೃಣಮೂಲ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಗೆದ್ದಿತ್ತು.
ಘರ್ಷಣೆಯಲ್ಲಿ ಟಿಎಂಸಿ ಕಾರ್ಯಕರ್ತ ಖಯೂಮ್ ಮುಲ್ಲಾ ಗುಂಡೇಟಿಗೆ ಬಲಿಯಾಗಿದ್ದಾರೆ. ಬಿಜೆಪಿ ಕಾರ್ಯಕರ್ತರಾದ ಪ್ರದೀಪ್ ಮಂಡಲ್ ಮತ್ತು ಸುಕಾಂತ ಮಂಡಲ್ ಕೂಡಾ ಮೃತರಲ್ಲಿ ಸೇರಿದ್ದಾರೆ.
ಶನಿವಾರ ಮಧ್ಯರಾತ್ರಿವರೆಗೆ ಬಶೀರ್ಹತ್ ಆಸ್ಪತ್ರೆಗೆ ಮೂರು ಶವಗಳನ್ನು ತರಲಾಗಿದೆ. ಆದರೆ ತಪನ್ ಮಂಡಲ್ ಎಂಬ ಮತ್ತೊಬ್ಬ ಕಾರ್ಯಕರ್ತ ಮೃತಪಟ್ಟಿದ್ದಾಗಿ ಬಿಜೆಪಿ ಹೇಳಿದೆ. ಐದು ಮಂದಿ ನಾಪತ್ತೆಯಾಗಿದ್ದಾರೆ ಎಂದೂ ಬಿಜೆಪಿ ಹೇಳಿದೆ.