ಕೊಲಂಬೋ,ಜೂ9(DaijiWorldNews/AZM): ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಶ್ರೀಲಂಕಾಕ್ಕೆ ಭೇಟಿ ನೀಡಿ ಇಲ್ಲಿಯ ಅಧ್ಯಕ್ಷ ಸಿರಿಸೇನಾ ಮೈತ್ರಿ ಪಾಲ ಮತ್ತು ಪ್ರಧಾನಿ ರಾನಿಲ್ ವಿಕ್ರಮ ಸಿಂಘೆ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದರು.
ಭಾರತ- ಶ್ರೀಲಂಕಾ ನಡುವಣ ದ್ವಿಪಕ್ಷೀಯ ಬಾಂಧವ್ಯ ಬಲವರ್ಧನೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಕಾರ ಸಂಬಂಧ ಮುಂದುವರೆಸುವ ಕುರಿತು ಈ ನಾಯಕರೊಂದಿಗೆ ಮೋದಿ ಗಹನ ಸಮಾಲೋಚನೆ ನಡೆಸಿದ್ದಾರೆ.
ಭಯೋತ್ಪಾದನೆ ವಿರುದ್ಧ ಶ್ರೀಲಂಕಾದ ಹೋರಾಟಕ್ಕೆ ಭಾರತ ಸಂಪೂರ್ಣ ಸಹಕಾರ , ಬೆಂಬಲ ನೀಡಲಿದೆ ಎಂದು ಮೋದಿ ಪುನರುಚ್ಚರಿಸಿದರು. ದಕ್ಷಿಣ ಏಷ್ಯಾದ ದ್ವೀಪ ಸಮೂಹಗಳ ರಾಷ್ಟ್ರ ಮಾಲ್ಡೀವ್ಸ್ಗೆ ಎರಡು ದಿನಗಳ ಭೇಟಿ ನಂತರ ಇಂದು ಬೆಳಗ್ಗೆ ರಾಜಧಾನಿ ಮಾಲೆಯಿಂದ ಶ್ರೀಲಂಕಾಗೆ ಆಗಮಿಸಿದ ಮೋದಿಯವರನ್ನು ಕೊಲಂಬೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲಂಕಾ ಪ್ರಧಾನಿ ರಾನಿಲ್ ವಿಕ್ರಮ ಸಿಂಘೆ ಆತ್ಮೀಯವಾಗಿ ಸ್ವಾಗತಿಸಿದರು.
ನಂತರ ಮೋದಿಯವರು ರಾಷ್ಟ್ರಾಧ್ಯಕ್ಷ ಸಿರಿಸೇನಾ ಮೈತ್ರಿ ಪಾಲ ಮತ್ತು ಪ್ರಧಾನಿ ವಿಕ್ರಮ ಸಿಂಘೆ ಅವರೊಂದಿಗೆ ದ್ವಿಪಕ್ಷೀಯ ಬಾಂಧವ್ಯ ಬಲವರ್ಧನೆ ಕುರಿತು ಸಮಾಲೋಚನೆ ನಡೆಸಿದರು. ಈಸ್ಟರ್ ಸಂಡೇ ಬಾಂಬ್ ದಾಳಿ ನಂತರ ತತ್ತರಿಸಿರುವ ದ್ವೀಪ ರಾಷ್ಟ್ರದಲ್ಲಿ ಭಯೋತ್ಪಾದನೆ ನಿಗ್ರಹಕ್ಕೆ ಭಾರತ ಅಗತ್ಯವಾದ ಎಲ್ಲಾ ಬೆಂಬಲ ಮತ್ತು ಸಹಕಾರ ನೀಡಲಿದೆ ಎಂದು ಇದೇ ಸಂದರ್ಭದಲ್ಲಿ ಮೋದಿ ದ್ವೀಪ ರಾಷ್ಟ್ರದ ನಾಯಕರಿಗೆ ಭರವಸೆ ನೀಡಿದರು.