ಬೆಂಗಳೂರು, ಜೂ 09 : (Daijiworld News/SM): ರಾಜ್ಯದಲ್ಲಿ ಆಡಳಿತದಲ್ಲಿರುವ ದೋಸ್ತಿ ಸರಕಾರದ ವಿರುದ್ಧ ಪಕ್ಷದೊಳಗಿನ ಕೆಲವು ಶಾಸಕರೇ ತಿರುಗಿ ಬೀಳುತ್ತಿದ್ದಂತೆ ಸಚಿವ ಸ್ಥಾನವನ್ನು ನೀಡುವ ಮೂಲಕ ಅವರನ್ನು ಸಮಾಧಾನ ಪಡಿಸಲು ಪಕ್ಷದ ಹಿರಿಯರು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಚರ್ಚೆ ನಡೆಸಲು ಸಿಎಂ ಕುಮಾರಸ್ವಾಮಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.
ಭಾನುವಾರ ಪದ್ಮನಾಭನಗರದ ನಿವಾಸದಲ್ಲಿ ದೇವೇಗೌಡರನ್ನು ಎಚ್.ಡಿ.ಕುಮಾರಸ್ವಾಮಿ ಭೇಟಿಯಾದರು. ಹೆಚ್ ಡಿಡಿಯವರನ್ನು ಭೇಟಿಯಾದ ಬಳಿಕ ನಿರಂತರ ೧ ತಾಸುಗಳ ಕಾಲ ಮಾತುಕತೆ ನಡೆಸಿದರು. ಜೂನ್ 12ರಂದು ಬೆಳಗ್ಗೆ 11.30ಕ್ಕೆ ಸಚಿವ ಸಂಪುಟ ವಿಸ್ತರಣೆ ನಡೆಸುವುದು ಬಹುತೇಕ ಖಚಿತವಾಗಿದೆ. ಎಚ್.ಡಿ. ಕುಮಾರಸ್ವಾಮಿ ಸಂಪುಟದಲ್ಲಿ ಮೂರು ಸಚಿವ ಸ್ಥಾನಗಳು ಖಾಲಿ ಇವೆ. ಜೆಡಿಎಸ್ ಕೋಟಾದಲ್ಲಿ 2 ಹಾಗೂ ಕಾಂಗ್ರೆಸ್ ಕೋಟಾದಲ್ಲಿ 1 ಸ್ಥಾನ ಖಾಲಿ ಇದೆ. ಆದರೆ ಎರಡು ಪಕ್ಷಗಳಲ್ಲಿ ಆಕಾಂಕ್ಷಿಗಳ ಸಂಖ್ಯೆ ಮಾತ್ರ ಅಧಿಕವಾಗಿದೆ. ಯಾರಿಗೆಲ್ಲ ಸಚಿವ ಸ್ಥಾನ ನೀಡಬೇಕೆನ್ನುವ ಬಗ್ಗೆ ದೇವೆಗೌಡರ ಜತೆ ಸಿಎಂ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಇನ್ನು ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಕೆಲವು ಹಾಲಿ ಸಚಿವರ ಸ್ಥಾನಕ್ಕೆ ಕೂಡ ಕುತ್ತು ಎದುರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ, ಯಾರೆಲ್ಲ ಸಂಪುಟ ಸೇರುತ್ತಾರೆ ಹಾಗೂ ಯಾರಿಗೆಲ್ಲ ಕೋಕ್ ನೀಡಲಾಗುತ್ತದೆ ಎನ್ನುವುದು ಸಂಪುಟ ವಿಸ್ತರಣೆಯ ಬಳಿಕವಷ್ಟೇ ತಿಳಿಯಲಿದೆ.