ಕಾಸರಗೋಡು, ಜೂ10(Daijiworld News/SS): ಇಲ್ಲಿನ ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ಕೋಟಿ ಮೌಲ್ಯದ ಚಿನ್ನವನ್ನು ಕಳ್ಳ ಸಾಗಾಟ ನಡೆಸುತ್ತಿದ್ದ ಇಬ್ಬರನ್ನು ಅಧಿಕಾರಿಗಳು ಬಂಧಿಸಿದ್ದಾರೆ.
ಕಳ್ಳ ಸಾಗಾಟ ನಡೆಸುತ್ತಿದ್ದವರನ್ನು ನಿಲಂಬೂರು ನಿವಾಸಿ ಶರ್ವಾದ್ ಮತ್ತು ಸಿದ್ಧಿಖ್ ಎಂದು ಗುರುತಿಸಲಾಗಿದೆ.
ಅಬುಧಾಬಿಯಿಂದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಗೋ ಏರ್ ವಿಮಾನದ ಮೂಲಕ ಬಂದಿಳಿದ ಶರ್ವಾದ್ ಮತ್ತು ಸಿದ್ಧಿಖ್ ಎಂಬವರಿಂದ ಒಟ್ಟು 3.300 ಕಿಲೋಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಚಿನ್ನವನ್ನು ಮಾತ್ರೆಯ ರೂಪದಲ್ಲಿ ಗುದದ್ವಾರದೊಳಗೆ ಬಚ್ಚಿಟ್ಟು ಓರ್ವ ಸಾಗಿಸುತ್ತಿದ್ದರೆ, ಇನ್ನೋರ್ವ ಸ್ಟೀಲ್ನ ಮೈಕ್ರೋ ಓವನ್ ಪಾತ್ರೆಯೊಳಗೆ ಚಿನ್ನವನ್ನು ಬಚ್ಚಿಟ್ಟು ಸಾಗಿಸುತ್ತಿದ್ದ. ಕಣ್ಣೂರಿನ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ ಈ ಕಾರ್ಯಾಚರಣೆ ನಡೆಸಿದ್ದು, ಬಂಧಿತ ಇಬ್ಬರನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಸದ್ಯ ಆರೋಪಿ ಶರ್ವಾದ್ನಿಂದ ಒಂದು ಕೋಟಿ ರೂ. ಬೆಲೆಬಾಳುವ ಒಟ್ಟು 24 ಚಿನ್ನದ ಬಿಲ್ಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.