ಗೋರಖ್ಪುರ್, ಜೂ10(Daijiworld News/SS): ಸಾಮಾಜಿಕ ಜಾಲತಾಣದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕುರಿತು ಅವಹೇಳನಕಾರಿ ಪೋಸ್ಟ್ ಮಾಡಿದ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಿಎಂ ಯೋಗಿ ಕುರಿತು ಅವಹೇಳನಕಾರಿ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಕ್ಕೆ ಬಂಧಿಸಲಾಗಿದ್ದು, ಆತನ ಮೊಬೈಲ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ಮೂರು ದಿನಗಳಲ್ಲಿ ಒಟ್ಟು ನಾಲ್ಕು ಮಂದಿಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಖಾಸಗಿ ಮಾಧ್ಯಮವೊಂದರ ಸಂಪಾದಕ, ಮಾಲೀಕ ಜತೆಗೆ ಹವ್ಯಾಸಿ ಪತ್ರಕರ್ತನನ್ನು ಶನಿವಾರವಷ್ಟೇ ಬಂಧಿಸಲಾಗಿತ್ತು. ಸಿಎಂ ಯೋಗಿ ಕುರಿತು ಆಕ್ಷೇಪಾರ್ಹ ವಿಷಯವನ್ನು ಬಿತ್ತರಿಸಿದ್ದಾರೆ ಎಂಬ ಆರೋಪದ ಮೇಲೆ ಬಂಧನ ಮಾಡಲಾಗಿತ್ತು. ಪ್ರಶಾಂತ್ ಕನೋಜ್ ಬಂಧಿತ ಪತ್ರಕರ್ತನಾಗಿದ್ದು, ಸಿಎಂ ಯೋಗಿ ಕುರಿತು ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ್ದರು ಎನ್ನಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಖಾಸಗಿ ಸುದ್ದಿ ಮಾಧ್ಯಮದ ಮಾಲೀಕ ಇಸಿಕಾ ಸಿಂಗ್ ಮತ್ತು ಸಂಪಾದಕ ಅನುಜ್ ಶುಕ್ಲ ಎಂಬುವವರನ್ನು ಶನಿವಾರ ನೋಯ್ಡಾದಲ್ಲಿ ಬಂಧಿಸಲಾಗಿತ್ತು.