ಬೆಂಗಳೂರು, ಜೂ10(Daijiworld News/SS): ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಸೋಮವಾರ ವಿಧಿವಶರಾದ ಹಿನ್ನೆಲೆ, ಗೌರವಾರ್ಥವಾಗಿ ಒಂದು ದಿನ ಸರಕಾರಿ ರಜೆಯನ್ನು ಸಿಎಂ ಎಚ್ಡಿ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.
ಗಿರೀಶ್ ಕಾರ್ನಾಡ್ ಕನ್ನಡದಲ್ಲಿ ನಾಟಕ ಸಾಹಿತ್ಯಕಾರರಾಗಿ, ಪ್ರಸಿದ್ಧ ರಂಗಭೂಮಿ ತಜ್ಞರಾಗಿ, ನಾಟಕಕಾರರಾಗಿ, ಚಲನಚಿತ್ರರಂಗದ ನಟರಾಗಿ, ನಿರ್ದೇಶಕರಾಗಿ, ಪ್ರಾಚಾರ್ಯರಾಗಿ, ಸಂಗೀತ ನಾಟಕ ಅಕಾಡೆಮಿಗಳ ಅಧ್ಯಕ್ಷರಾಗಿ ಹಲವು ರಂಗಗಳಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧರಾಗಿದ್ದರು. ಈ ಹಿನ್ನಲೆಯಲ್ಲಿ ಮುಂದಿನ ಮೂರು ದಿನಗಳವರೆಗೆ ಶೋಕಾಚರಣೆಯನ್ನು ಘೋಷಿಸಲಾಗಿದ್ದು, ಸಭೆ ಸಮಾರಂಭಗಳನ್ನು ಮುಂದೂಡುವಂತೆ ಸೂಚಿಸಲಾಗಿದೆ.
ಸರಕಾರಿ ಕಚೇರಿಗಳು, ಶಾಲೆ, ಕಾಲೇಜುಗಳಿಗೆ ಇಂದು ಒಂದು ದಿನ ರಜೆ ಇರಲಿದೆ. ಹಾಗೂ ಮೂರು ದಿನಗಳ ಕಾಲ ರಾಜ್ಯಾದ್ಯಂತ ಶೋಕಾಚರಣೆ ಘೋಷಿಸಲಾಗುವುದು ಹಾಗೂ ಸಕಲ ಸರ್ಕಾರಿ ಗೌರವಗಳೊಂದಿಗೆ ಮೃತರ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.