ನವದೆಹಲಿ, ಜೂ 10(Daijiworld News/MSP): ಲೋಕಸಭಾ ಚುನಾವಣೆಯ ನಂತರ ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಎಚ್ಚೆತ್ತುಕೊಂಡ ಕಾಂಗ್ರೆಸ್ ಪಕ್ಷದಲ್ಲಿ ಹಲವು ಮಹತ್ವದ ಬದಲಾವಣೆ ತರಲು ಯೋಚಿಸಿದೆ. ಇದೇ ಹಿನ್ನಲೆಯಲ್ಲಿ ರಾಹುಲ್ ಮತ್ತು ಕಾಂಗ್ರೆಸ್ ನ ಹಿರಿಯ ನಾಯಕರ ನಡುವೆ ರಾಜೀನಾಮೆ ಜಟಾಪಟಿ ನಡೆದಿತ್ತು. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ನೀಡಿರುವ ರಾಜೀನಾಮೆಯನ್ನು ಈವರೆಗೆ ಕಾಂಗ್ರೆಸ್ ಕಾರ್ಯಕಾರಣಿ ಸಭೆ ಅಂಗೀಕಾರ ಮಾಡಿಲ್ಲ. ಅಲ್ಲದೆ ಮತ್ತೆ ಅವರನ್ನೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವಂತೆಯೂ ಒತ್ತಾಯಿಸುತ್ತಿದೆ. ಆದರೆ ಮತ್ತೆ ಅಧ್ಯಕ್ಷ ಸ್ಥಾನ ಮುಂದುವರಿಯುವ ಆಸಕ್ತಿಯನ್ನು ರಾಹುಲ್ ಗಾಂಧಿ ತೋರುತ್ತಿಲ್ಲ.
ಅಧ್ಯಕ್ಷ ಸ್ಥಾನಕ್ಕೆ ಮೊದಲು ಯುವ ನಾಯಕ, ರಾಹುಲ್ ಆಪ್ತ , ಸಚಿನ್ ಪೈಲೆಟ್ ಅವರ ಹೆಸರು ಕೇಳಿಬಂದಿತ್ತಾದರೂ ಆ ಬಳಿಕ ರಾಹುಲ್ ಗಾಂಧಿ ಖುದ್ದು ಅಧ್ಯಕ್ಷ ಸ್ಥಾನಕ್ಕೆ ಒಬ್ಬ ಸೂಕ್ತ, ನಿಷ್ಠಾವಂತ, ಅನುಭವಿ ಮತ್ತು ದಲಿತ ನಾಯಕನನ್ನು ಹುಡುಕಿ ಎಂದು ಆಪ್ತರರಲ್ಲಿ ಸೂಚಿಸಿದ್ದರು. ಇದೀಗ ಆ ಸ್ಥಾನಕ್ಕೆ ಕರ್ನಾಟಕ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೆಸರು ಪ್ರಸ್ತಾಪವಾಗುತ್ತಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಒಂದು ವೇಳೆ ಇದು ಸಾಧ್ಯವಾದರೆ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಏರಿದರೆ ಎರಡು ದಶಕಗಳ ನಂತರ ಗಾಂಧಿ ಕುಟುಂಬದ ಹೊರತಾದ ವ್ಯಕ್ತಿ ಈ ಹುದ್ದೆಗೆ ಏರಿದ ಸಾಧನೆಯನ್ನು ಖರ್ಗೆ ನಿರ್ಮಿಸಲಿದ್ದಾರೆ.
1978ರ ಬಳಿಕ ಈವರೆಗೆ ಬರೋಬ್ಬರಿ 40 ವರ್ಷಗಳಲ್ಲಿ ಪಿ ವಿ ನರಸಿಂಹ ರಾವ್ ಮತ್ತು ಸೀತಾರಾಂ ಕೇಸರಿ ಅವಧಿ ಹೊರತುಪಡಿಸಿ (1992-1998) ಮತ್ತೊಮ್ಮೆ ದೇಶದ ಅತ್ಯಂತ ಹಳೆಯ ಪಕ್ಷದ ಚುಕ್ಕಾಣಿ ಗಾಂಧಿ ಕುಟುಂಬದ ಹೊರಗಿನವರ ಪಾಲಾಗಲಿದೆ.
1978ರಲ್ಲಿ ಇಂದಿರಾಗಾಂಧಿ ಪಕ್ಷದ ಅಧ್ಯಕ್ಷೆಯಾಗಿ ಚುಕ್ಕಾಣಿ ಹಿಡಿದ ಬಳಿಕ, 1992ರಿಂದ 96ರವೆಗೆ ಪಿ ವಿ ನರಸಿಂಹರಾವ್ ಹಾಗೂ 1996ರಿಂದ 98ರವರೆಗೆ ಸೀತಾರಾಂ ಕೇಸರಿ ಅವರು ಅಧ್ಯಕ್ಷರಾಗಿದ್ದನ್ನು ಹೊರತುಪಡಿಸಿ, ಪಕ್ಷದ ಚುಕ್ಕಾಣಿ ಗಾಂಧಿ ಕುಟುಂಬದ ಹಿಡಿತದಲ್ಲಿಯೇ ಇತ್ತು. ಇಂದಿರಾ ಬಳಿಕ, ಪುತ್ರ ರಾಜೀವ್ ಗಾಂಧಿ ಮತ್ತು ಆ ಬಳಿಕ ಅವರ ಪತ್ನಿ ಸೋನಿಯಾ ಗಾಂಧಿ ಹಾಗೂ ನಂತರ ರಾಹುಲ್ ಗಾಂಧಿಗೆ ಪಕ್ಷದ ಚುಕ್ಕಾಣಿ ವರ್ಗಾವಣೆಯಾಗಿತ್ತು. ಆ ಮೂಲಕ ಪಕ್ಷದಲ್ಲಿ ವಂಶಪಾರಂಪರ್ಯ ಮುಂದುವರಿದಿದೆ. ಗಾಂಧಿ ಕುಟುಂಬದ ಪಕ್ಷ ಎಂಬ ಟೀಕೆಗಳಿಗೆ ಪಕ್ಷ ಗುರಿಯಾಗುತ್ತಲೇ ಇತ್ತು. ಆದರೆ, ಈಗ ರಾಹುಲ್ ಗಾಂಧಿಯವರ ಈ ನಿರ್ಧಾರ ನಿಜವಾದಲ್ಲಿ, ಕಾಂಗ್ರೆಸ್ ಪಕ್ಷಕ್ಕೆ ಅಂಟಿದ್ದ ಆ ಅಪವಾದ ಕೂಡ ಕಳಚಬಹುದು. ಮುಖ್ಯವಾಗಿ ಬಿಜೆಪಿ ಮತ್ತು ಸಂಘಪರಿವಾರದ ಎಂದಿನ ಟೀಕೆಯಾದ ಕುಟುಂಬ ರಾಜಕಾರಣ ಅಥವಾ ವಂಶಪಾರಂಪರ್ಯ ರಾಜಕಾರಣದ ಆರೋಪದಿಂದ ಪಾರಾಗಬಹುದು.