ನವದೆಹಲಿ, ಜೂ10(Daijiworld News/SS): ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ 8 ವರ್ಷದ ಬಾಲಕಿಯ ಮೇಲೆ ನಡೆದಿದ್ದ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ 7 ಆರೋಪಿಗಳಲ್ಲಿ ಐವರು ಆರೋಪಿಗಳನ್ನು ದೋಷಿಗಳೆಂದು ಪಠಾಣ್ಕೋಟ್ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.
2018, ಜನವರಿ 10ರಂದು ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ಬಕರ್ವಾಲ್ ಅಲೆಮಾರಿ ಸಮುದಾಯದ 8 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕಲ್ಲಿನಿಂದ ಮುಖವನ್ನು ಜಜ್ಜಿ ಕೊಲೆ ಮಾಡಲಾಗಿತ್ತು. ಬಳಿಕ ಘಟನೆ ವಿರೋಧಿಸಿ ದೇಶಾದ್ಯಂತ ತೀವ್ರ ಪ್ರತಿಭಟನೆಯು ವ್ಯಕ್ತವಾಗಿ, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂಬ ಕೂಗು ಕೇಳಿಬಂದಿತ್ತು.
ಅತ್ಯಾಚಾರ ಹಾಗೂ ಕೊಲೆಗೆ ಸಂಬಧಿಸಿದಂತೆ ಕಥುವ ಗ್ರಾಮದ ಮುಖಂಡ ಸಂಜಿ ರಾಮ್, ಆತನ ಮಗ ವಿಶಾಲ್, ಗೆಳೆಯರಾದ ಆನಂದ್ ದತ್ತ ಹಾಗೂ ಪ್ರಕರಣದಲ್ಲಿ ಅತ್ಯಾಚಾರಿಗಳಿಗೆ ಸಹಕರಿಸಿದ ಪೊಲೀಸ್ ಅಧಿಕಾರಿಗಳಾದ ದೀಪಕ್ ಕಜೂರಿಯ, ಸುರೇಂದ್ರ ವರ್ಮ, ಮುಖ್ಯ ಪೇದೆ ತಿಲಕ್ ರಾಜ್ ಮೇಲಿನ ಆರೋಪ ಸಾಬೀತಾಗಿದೆ ಎಂದು ಜೂನ್.3 ರಂದು ಅಭಿಪ್ರಾಯ ಪಟ್ಟಿದ್ದ ನ್ಯಾಯಮೂರ್ತಿ ತೇಜ್ವಿಂದರ್ ಸಿಂಗ್, ಜೂನ್.10ಕ್ಕೆ ತೀರ್ಪನ್ನು ಕಾಯ್ದಿರಿಸಿದ್ದರು.
ಇದೀಗ ಐವರು ಆರೋಪಿಗಳಾದ ಕಥುವಾ ಗ್ರಾಮದ ಮುಖ್ಯಸ್ಥ ಸಾಂಜಿ ರಾಮ್, ಆತನ ಮಗ ವಿಶಾಲ್ ಹಾಗೂ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳಾದ ದೀಪಕ್ ಖಜುರಿಯಾ ಮತ್ತು ಸುರೇಂಸರ್ ವರ್ಮಾ ಮತ್ತು ಹೆಡ್ ಕಾನ್ಸ್ಟೇಬಲ್ ತಿಲಕ್ ರಾಜ್ ಎಂಬುವವರನ್ನು ದೋಷಿಗಳು ಎಂದು ಕೋರ್ಟ್ ತೀರ್ಪು ನೀಡಿದೆ. ಮಾತ್ರವಲ್ಲ, ಎಲ್ಲರೂ ಜೀವಾವಧಿಯಿಂದ ಗಲ್ಲುಶಿಕ್ಷೆಯನ್ನು ಎದುರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕೋರ್ಟ್ ತೀರ್ಪು ನೀಡುವ ಮುನ್ನ ಪಠಾಣ್ಕೋಟ್ನಲ್ಲಿರುವ ಜಿಲ್ಲಾ ಮತ್ತು ಸೆಸ್ಸನ್ಸ್ ಕೋರ್ಟ್ ಆವರಣದಲ್ಲಿ ಭಾರಿ ಭದ್ರತೆಯನ್ನು ನಿಯೋಜಿಸಲಾಗಿತ್ತು.