ಬೆಂಗಳೂರು, ಜೂ10(Daijiworld News/SS): ಇಂದು ಬೆಳಗ್ಗೆ ನಿಧನರಾದ ಹಿರಿಯ ಸಾಹಿತಿ, ರಂಗಕರ್ಮಿ, ನಟ ಗಿರೀಶ್ ಕಾರ್ನಾಡ್ ಅವರ ಅಂತ್ಯಕ್ರಿಯೆ ಕಲ್ಲಪಳ್ಳಿ ವಿದ್ಯುತ್ ಚಿತಾಗಾರದಲ್ಲಿ ಅವರ ಕೊನೇ ಆಸೆಯಂತೆಯೇ ನಡೆಯಿತು.
ಬೈಯ್ಯಪ್ಪನಹಳ್ಳಿ ಸಮೀಪದ ಕಲ್ಲಪಳ್ಳಿ ವಿದ್ಯುತ್ ಚಿತಾಗಾರದಲ್ಲಿ ಮಧ್ಯಾಹ್ನ ಅಂತ್ಯ ಸಂಸ್ಕಾರ ನೆರವೇರಿತು. ಕಾರ್ನಾಡರು ವ್ಯಕ್ತಪಡಿಸಿದ್ದ ಅಪೇಕ್ಷೆಯಂತೆ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರವನ್ನು ಧಾರ್ಮಿಕ ವಿಧಿ ವಿಧಾನಗಳಿಲ್ಲದೇ ನೆರವೇರಿಸಲಾಯಿತು. ಈ ವೇಳೆ ಅವರ ಆಪ್ತರು ಮಾತ್ರ ಇದ್ದರು. ಸರ್ಕಾರಿ ಗೌರವ ಬೇಡ ಎಂದಿದ್ದ ಕುಟುಂಬಸ್ಥರನ್ನು ಮನವೊಲಿಸಲು ಸಚಿವ ಡಿ.ಕೆ.ಶಿವಕುಮಾರ್ ಪ್ರಯತ್ನ ಪಟ್ಟರೂ ಆಗಲಿಲ್ಲ. ನಂತರ ಮಾತನಾಡಿದ ಸಚಿವ ಡಿಕೆಶಿ, ಕಾರ್ನಾಡ್ ಕುಟುಂಬದವರು ಸರ್ಕಾರಿ ಗೌರವ ಸಲ್ಲಿಸಲು ಒಪ್ಪಲೇ ಇಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕೂಡ ಕುಟುಂಬದವರ ಜತೆ ಮಾತನಾಡಿದರು ಎಂದು ತಿಳಿಸಿದರು.
ಸಾಹಿತ್ಯ ಕ್ಷೇತ್ರದ ಸಾಧನೆಗೆ ಜ್ಞಾನಪೀಠ ಪ್ರಶಸ್ತಿ ಪಡೆದ ಕಾರ್ನಾಡರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ಪದ್ಮಶ್ರೀ, ಪದ್ಮಭೂಷಣ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.
ಗಂಭೀರ ಪಾತ್ರಗಳನ್ನು ನಿಭಾಯಿಸುವ ಮೂಲಕ ಸಿನಿಮಾ ನಟನೆಯಲ್ಲೂ ಗುರುತಿಸಿಕೊಂಡಿದ್ದ ಕಾರ್ನಾಡರ ಕೊನೇ ಚಿತ್ರ ‘ಟೈಗರ್ ಜಿಂದಾ ಹೈ’. ಈ ಸಿನಿಮಾದಲ್ಲಿ ಕಾರ್ನಾಡರು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರೊಂದಿಗೆ ನಟಿಸಿದ್ದರು. ಲಂಕೇಶರೊಂದಿಗೆ ನಟಿಸಿದ್ದ, ಕಾದಂಬರಿ ಆದಾರಿತ ‘ಸಂಸ್ಕಾರ’ ಚಿತ್ರ ಭಾರಿ ಜನಪ್ರಿಯತೆ ಪಡೆದುಕೊಂಡಿತ್ತು.