ಕೋಲ್ಕತಾ, ಜೂ 10 (Daijiworld News/SM): ಪಶ್ಚಿಮ ಬಂಗಾಳದಲ್ಲಿ ಕಳೆದ ಒಂದು ವಾರದಲ್ಲಿ ನಡೆದ ಹಿಂಸಾಚಾರಕ್ಕೆ ಕೇಂದ್ರ ಸರಕಾರ ಕೂಡ ಹೊಣೆಯಾಗಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಹಿಂಸಾಚಾರಕ್ಕೆ ಕೇಂದ್ರವೂ ಸಮಾನ ಹೊಣೆಗಾರನಾಗಿದ್ದು, ಕೇಂದ್ರ ಸರಕಾರ ಮತ್ತು ಬಿಜೆಪಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿವೆ ಎಂದು ಮಮತಾ ವಾಗ್ದಾಳಿ ನಡೆಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಕೇಂದ್ರ ಸರಕಾರದ ವಿರುದ್ಧ ದೇಶದಲ್ಲಿ ಪ್ರತಿಭಟನೆ ಮಾಡುವ ಏಕೈಕ ಧ್ವನಿ ನಾನು. ಆದರೆ, ಕೇಂದ್ರ ಸರಕಾರ ನನ್ನ ಸದ್ದಡಗಿಸಲು ಯತ್ನಿಸುತ್ತಿದೆ. ಆ ಮೂಲಕ ತನ್ನ ಸರಕಾರವನ್ನು ಉರುಳಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಪಕ್ಷ ವಿವಿಧ ಸಾಮಾಜಿಕ ಮಾಧ್ಯಮಗಳ ಮೂಲಕ ಸುಳ್ಳು ಸುದ್ದಿಗಳನ್ನು ಹಬ್ಬಿಸಲು ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ರಾಜ್ಯದಲ್ಲಿ ಯಾವುದೇ ಹಿಂಸಾಚಾರ ಅಥವಾ ದಂಗೆ ನಡೆದರೆ ಅದಕ್ಕೆ ಕೇಂದ್ರವೂ ಸಮಾನ ಹೊಣೆಗಾರಿಕೆಯನ್ನು ಹೊಂದಿದೆ ಎಂದು ಮಮತಾ ಹೇಳಿದ್ದಾರೆ.