ಬೆಂಗಳೂರು, ಜೂ 10 (Daijiworld News/SM): ನಿರಂತರವಾಗಿ ಏರುಗತಿಯಲ್ಲಿ ಸಾಗಿದ್ದ ಪೆಟ್ರೋಲ್ ಹಾಗೂ ಡೀಸೆಲ್ ದರ ಕೊಂಚ ಇಳಿಕೆಯಾಗಿದ್ದು, ವಾಹನ ಸವಾರರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಕಳೆದ ಕೆಲವು ದಿನಗಳಿಂದ ಇಂಧನ ದರ ಒಂದಿಷ್ಟು ಇಳಿಕೆಯಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕುಸಿಯುತ್ತಿದ್ದು ಇದೇ ಕಾರಣದಿಂದಾಗಿ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಇಳಿಕೆಯಾಗಿದೆ ಎನ್ನಲಾಗಿದೆ.
ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ಸೋಮವಾರದಂದು ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 11-13ಪೈಸೆ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್ ಗೆ 11 ರಿಂದ 12ಪೈಸೆ ಯಷ್ಟು ಇಳಿಕೆಯಾಗಿದೆ.
ಮೇ 20ರಿಂದ ಜೂನ್ ಮೊದಲ ವಾರದ ತನಕ ಸರಿ ಸುಮಾರು 70 ರಿಂದ 80 ಪೈಸೆಯಂತೆ ಇಂಧನ ದರ ಹೆಚ್ಚಳವಾಗಿತ್ತು. ಆದರೆ, ನಂತರ ದರದಲ್ಲಿ ಇಳಿಕೆ ಕಂಡು ಬಂದಿತ್ತು. ಇನ್ನು ಪ್ರತಿದಿನ ಇಂಧನ ಬೆಲೆ ಬದಲಾವಣೆಯನ್ನು ಜಾರಿಗೆ ತಂದ ಬಳಿಕ ಪೆಟ್ರೋಲ್ ಡೀಸೆಲ್ ದರದಲ್ಲಿ ಸಾಕಷ್ಟು ವ್ಯತ್ಯಾಸವಾಗಿತ್ತು. ಅದರಲ್ಲೂ ಇಂಧನ ದರ ಹೆಚ್ಚಳಗೊಂಡಿರುವುದೇ ಅಧಿಕವಾಗಿತ್ತು. ಆದರೆ, ಈ ವಿಚಾರ ಗ್ರಾಹಕರಿಗೆ ಅಷ್ಟೊಂದು ಪ್ರಮಾಣದಲ್ಲಿ ತಿಳಿಯುತ್ತಿರಲಿಲ್ಲ.
ಇದೀಗ ಪ್ರತಿನಿತ್ಯ ಇಂಧನ ಬೆಲೆಯಲ್ಲಿ ಒಂದಿಷ್ಟು ಇಳಿಕೆಯಾಗುತ್ತಿದ್ದು, ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ.