ನವದೆಹಲಿ, ಜೂ11(Daijiworld News/SS): ಭ್ರಷ್ಟಚಾರ ಮತ್ತು ಲೈಂಗಿಕ ಕಿರುಕುಳದ ಆರೋಪ ಹೊತ್ತಿದ್ದ ಹನ್ನೆರಡು ಮಂದಿ ಹಿರಿಯ ಐಟಿ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಕಡ್ಡಾಯವಾಗಿ ನಿವೃತ್ತಿ ಪಡೆಯುವಂತೆ ಸೂಚಿಸಿದವರ ಪಟ್ಟಿಯಲ್ಲಿ ಮುಖ್ಯ ಆಯುಕ್ತ, ಮಹಾ ಆಯುಕ್ತ, ಮತ್ತು ಆಯುಕ್ತರು ಸೇರಿದ್ದಾರೆ ಎನ್ನಲಾಗಿದೆ. ಐಟಿ ಇಲಾಖೆಯ ಜಂಟಿ ಆಯುಕ್ತ ಮತ್ತು ಜಾರಿ ನಿರ್ದೇಶನಾಲಯದ ಮಾಜಿ ಉಪ ನಿರ್ದೇಶಕ ಅಶೋಕ್ ಅಗರ್ವಾಲ್, ಆಯುಕ್ತ ಎಸ್ ಕೆ ಶ್ರೀವಾಸ್ತವ, ಕಂದಾಯ ಸೇವೆಯ ಅಧಿಕಾರಿ ಹೊಮಿ ರಾಜವಂಶ್ ಸೇರಿದ್ದಾರೆ. ಈ ಎಲ್ಲ ಅಧಿಕಾರಿಗಳೂ ಹಣಕಾಸು ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳಾಗಿದ್ದಾರೆ ಎಂದು ತಿಳಿದುಬಂದಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಖಡಕ್ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. 12 ಐಟಿ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ನೀಡಿದ ಕೇಂದ್ರ ಹನ್ನೆರಡರಲ್ಲಿ ಎಂಟು ಜನರನ್ನು ಈಗಾಗಲೇ ಸಿಬಿಐ ತನಿಖೆಗೊಳಡಿಸಿದ್ದು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಕಡ್ಡಾಯ ನಿವೃತ್ತಿ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ.
ಮೊದಲ ಬಾರಿಗೆ ಸರ್ಕಾರ ಉನ್ನತಾಧಿಕಾರಿಗಳ ವಿರುದ್ಧ ಇಂಥ ಕ್ರಮ ಕೈಗೊಂಡಿರುವದು ಭ್ರಷ್ಟ ಅಧಿಕಾರಿಗಳ ಪಾಲಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ.