ನವದೆಹಲಿ, ಜ.19 (DaijiworldNews/AA): ಅರವಿಂದ ಕೇಜ್ರಿವಾಲ್ ಅವರು ಕುಳಿತಿದ್ದ ವಾಹನವು ಸ್ಥಳೀಯ ಮೂವರು ಯುವಕರಿಗೆ ಡಿಕ್ಕಿಯಾಗಿತ್ತು. ಆದರೆ, ಎಎಪಿಯು ಕೇಜ್ರಿವಾಲ್ ಅವರ ಮೇಲೆ ದಾಳಿ ನಡೆಸಲಾಗಿದೆ ಎಂಬ ಸುಳ್ಳು ನಿರೂಪಣೆಯನ್ನು ಸೃಷ್ಟಿಸುತ್ತಿದೆ ಎಂದು ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಜ್ರಿವಾಲ್ ಅವರ ಕಾರಿನ ಮೇಲೆ ಪರ್ವೇಶ್ ವರ್ಮಾ ಅವರ ಗೂಂಡಾಗಳು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಎಎಪಿ ನಾಯಕರು ಶನಿವಾರ ಆರೋಪಿಸಿದ್ದರು. ಈ ಬಗ್ಗೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಪರ್ವೇಶ್ ವರ್ಮಾ ಅವರು, ಎಎಪಿಯು ತಮ್ಮ ಮುಖ್ಯಸ್ಥ ಹಾಗೂ ದೆಹಲಿಯ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ಅವರ ಮೇಲೆ ದಾಳಿ ನಡೆಸಲಾಗಿದೆ ಎಂಬುದಾಗಿ ಸುಳ್ಳು ನಿರೂಪಣೆ ಮಾಡುತ್ತಿದೆ. ತಮ್ಮ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೆ ದೂರು ನೀಡಿರುವುದಾಗಿ ಹಾಗೂ ಪೂರಕವಾಗಿ ವಿಡಿಯೊ ಸಾಕ್ಷ್ಯಗಳನ್ನು ಸಲ್ಲಿಸಿರುವುದಾಗಿ ಹೇಳಿದ್ದಾರೆ.
ಕೇಜ್ರಿವಾಲ್ ಅವರ ಮೇಲೆ ದಾಳಿ ಮಾಡಿದವರು ತಮ್ಮ ಕಡೆಯ ಗೂಂಡಾಗಳು ಎಂದು ಎಎಪಿ ಆರೋಪಿಸಿರುವುದಕ್ಕೆ, ನವದೆಹಲಿ ಕ್ಷೇತ್ರದಲ್ಲಿರುವ ಒಂದು ಲಕ್ಷ ಮತದಾರರೂ ತಮ್ಮ ಕುಟುಂಬದವರೇ. ಕೇಜ್ರಿವಾಲ್ ಅವರು ಕ್ಷೇತ್ರದ ಜನರನ್ನು ಗೂಂಡಾಗಳು ಎನ್ನುತ್ತಿದ್ದಾರೆ. ಅವರ ವಾಹನಕ್ಕೆ ಡಿಕ್ಕಿಯಾದ ಮೂವರು ಯುವಕರೂ ಸ್ಥಳೀಯ ಮತದಾರರೆ. ಅವರು, ಉದ್ಯೋಗಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಲು ಬಯಸಿದ್ದರು ಎಂದಿದ್ದಾರೆ.
ಪ್ರಚಾರದ ವೇಳೆ ಕೇಜ್ರಿವಾಲ್ ಅವರ ಬೆಂಗಾವಲು ಪಡೆಯಲ್ಲಿ 50 ವಾಹನಗಳಿರುತ್ತವೆ. ಎಕೆ 47 ಸೇರಿದಂತೆ ಇತರ ಶಸ್ತ್ರಾಸ್ತ್ರಗಳೊಂದಿಗೆ ಪಂಜಾಬ್ ಪೊಲೀಸ್ ಇಲಾಖೆಯ 350 ಸಿಬ್ಬಂದಿ ಅವುಗಳಲ್ಲಿರುತ್ತಾರೆ ಎಂದು ವರ್ಮಾ ತಿಳಿಸಿದ್ದಾರೆ. ಆ ಮೂಲಕ ಕೇಜ್ರಿವಾಲ್ ಅವರ ಬೆಂಗಾವಲು ಪಡೆಯನ್ನು ದಾಟಿ ದಾಳಿ ನಡೆಸುವುದು ಅಸಾಧ್ಯ ಎಂದು ತಿರುಗೇಟು ನೀಡಿದ್ದಾರೆ.
ಕೇಜ್ರಿವಾಲ್ 20,000 ಮತಗಳ ಅಂತರದಿಂದ ಸೋಲು ಕಾಣಲಿದ್ದಾರೆ. ಎಎಪಿ ಮುಖ್ಯಸ್ಥರಿಗೆ ನವದೆಹಲಿ ಕ್ಷೇತ್ರದಿಂದ ಹೊರಗೆ ಹೋಗಿ ಪ್ರಚಾರ ನಡೆಸಲು ಸಾಧ್ಯವಾಗುತ್ತಿಲ್ಲ. ಸ್ಥಳೀಯರ ನೀರಸ ಪ್ರತಿಕ್ರಿಯೆಯಿಂದಾಗಿ, ಅವರು ಸಾರ್ವಜನಿಕವಾಗಿ ಒಂದೇ ಒಂದು ಸಮಾವೇಶ ನಡೆಸಿದ ಫೋಟೊ ಅಥವಾ ವಿಡಿಯೊ ಕಾಣಸಿಗುತ್ತಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಕೇಜ್ರಿವಾಲ್ ಅವರು, 2020ರ ಚುನಾವಣೆಗೂ ಮುನ್ನ ನೀಡಿದ್ದ ಭರವಸೆಗಳ ಪೈಕಿ ಹತ್ತನ್ನಾದರೂ ಈಡೇರಿಸಿಲ್ಲ. ಇದೀಗ ಮಹಿಳೆಯರು ಮತ್ತು ಯುವಕರು ಪ್ರಶ್ನೆಗಳನ್ನು ಕೇಳುತ್ತಿರುವುದರಿಂದ ಅವರು ಕಕ್ಕಾಬಿಕ್ಕಿಯಾಗಿದ್ದು, ಚಡಪಡಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.