ಹುಬ್ಬಳ್ಳಿ, ಜ.19 (DaijiworldNews/AA): ಕೇಂದ್ರ ಸರ್ಕಾರ ಕಡಿಮೆ ದರದಲ್ಲಿ ಅಕ್ಕಿ ನೀಡಿದ್ರೆ ರಾಜ್ಯ ಸರ್ಕಾರಕ್ಕೆ ನೂರಾರು ಕೋಟಿ ಹಣ ಉಳಿಯುತ್ತದೆ. ಸಿಎಂ ಸಿದ್ದರಾಮಯ್ಯ ಅವರಿಗೆ ಬಡವರ ಬಗ್ಗೆ ಕಾಳಜಿ ಇದ್ರೆ ನಮ್ಮಿಂದ ಕಡಿಮೆ ದರದಲ್ಲಿ ಅಕ್ಕಿ ಖರೀದಿಸಬಹುದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 10 ಕೆಜಿ ಅಕ್ಕಿ ರಾಜ್ಯ ಸರ್ಕಾರ ನೀಡುತ್ತಿಲ್ಲ. ದರ ಕಡಿಮೆ ಮಾಡಿ ಅಕ್ಕಿ ನೀಡಲು ಕೇಂದ್ರ ಸರ್ಕಾರ ಸಿದ್ಧವಿದೆ. ಆದ್ರೆ ರಾಜ್ಯ ಸರ್ಕಾರದಿಂದ ಯಾವುದೇ ಆರ್ಡರ್ ಬಂದಿಲ್ಲ. ಎಫ್ಸಿಐದಲ್ಲಿ ಅಕ್ಕಿ ಲಭ್ಯವಿದೆ, ರಾಜ್ಯ ಸರ್ಕಾರ ಬೇಕಾದ್ರೆ ಕಡಿಮೆ ದರದಲ್ಲಿ ಅಕ್ಕಿ ಕೊಂಡುಕೊಳ್ಳಬಹುದು. ಈ ಹಿಂದೆ ರಾಜ್ಯ ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಎರಡು ಬಾರಿ ಅಕ್ಕಿಗಾಗಿ ಕೇಂದ್ರ ಬಳಿ ಮನವಿ ಮಾಡಿದ್ದಾರೆ. ಹೀಗಾಗಿ ಕಡಿಮೆ ದರದಲ್ಲಿ ಅಕ್ಕಿ ಕೊಡಲು ಕೇಂದ್ರ ಮುಂದಾಗಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದಿಂದ 560 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ. ದೇಶದಲ್ಲಿ 3 ಲಕ್ಷ ಹಳ್ಳಿಗಳ ಸರ್ವೆ ಕಾರ್ಯ ನಡೆದಿದೆ. ಗ್ರಾಮೀಣ ಭಾಗದಲ್ಲಿ ವ್ಯಾಜ್ಯ, ಗಡಿ ಸಮಸ್ಯೆ, ಕಡಿಮೆ ಆಗಿದೆ. ಆದರೆ ನಿನ್ನೆ ಉದ್ಘಾಟನೆ ಮಾಡಿದ ಆಹ್ವಾನ ಪತ್ರದಲ್ಲಿ ಪ್ರಧಾನಿ ಮಂತ್ರಿ ಫೋಟೋ ಇಲ್ಲ. ಇದು ಕರ್ನಾಟಕ ಸರ್ಕಾರದ ಚಿಲ್ಲರೆತನ. ಈ ಚಿಲ್ಲರೆ ರಾಜಕೀಯ ಬಿಡಬೇಕು. ಈ ಯೋಜನೆಗೆ ಡ್ರೋನ್ ಸರ್ವೆ ಮಾಡಿಸಿತ್ತಿರೋದು ಕೇಂದ್ರ ಸರ್ಕಾರ, ಹಣ ನೀಡುತ್ತಿರುವುದು ಕೇಂದ್ರ ಸರ್ಕಾರ, ಇದನ್ನ ಮರೆಮಾಚಿ ರಾಜ್ಯ ಸರ್ಕಾರ ಚಿಲ್ಲರೆ ತನ ತೋರಿಸಿದೆ ಎಂದು ಆಕ್ರೋಶ ಹೊರ ಹಾಕಿದರು.
ಸ್ವಾಮಿತ್ವ ಯೋಜನೆ ವಿಚಾರವಾಗಿ ಮಾತನಾಡಿದ ಅವರು, ಇದು 100% ಭಾರತ ಸರ್ಕಾರದ ಯೋಜನೆ. ಆದರೆ ಈ ಯೋಜನೆಗೆ ರಾಜ್ಯ ಸರ್ಕಾರದ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ಕೊಟ್ಟಿದ್ದಾರೆ. ಇದು ಪ್ರಧಾನಿಗಳ ಬಹು ಆಕಾಂಕ್ಷೆಯ ಯೋಜನೆ. ಆರಂಭದಲ್ಲಿ ರಾಜ್ಯದಲ್ಲಿ 30,715 ಹಳ್ಳಿಗಳ ಸರ್ವೆ ಕಾರ್ಯ ಈ ಯೋಜನೆಯಡಿ ಗುರಿ ಹೊಂದಲಾಗಿದೆ ಎಂದರು.