ಕೋಲ್ಕತಾ, ಜೂ11(Daijiworld News/SS): ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಸಂಘರ್ಷಗಳು ನಿಲ್ಲುವ ಸೂಚನೆ ಕಾಣುತ್ತಿಲ್ಲ. ಇದೀಗ ಮತ್ತೆ ಸಂಘರ್ಷ ಮುಂದುವರೆದಿದ್ದು, ಕಚ್ಛಾ ಬಾಂಬ್ ದಾಳಿಯಲ್ಲಿ ಓರ್ವ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮೃತ ವ್ಯಕ್ತಿಯನ್ನು ಮಹಮದ್ ಮುಖ್ತಾರ್ (68) ಎಂದು ಗುರುತಿಸಲಾಗಿದೆ. ಗಾಯಾಳುಗಳಲ್ಲಿ ಮುಖ್ತಾರ್ ಪತ್ನಿ ಕೂಡ ಸೇರಿದ್ದಾರೆ ಎನ್ನಲಾಗಿದೆ.
ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಕ್ಷದ ಕಾರ್ಯಕರ್ತರು ಮತ್ತು ಬಿಜೆಪಿ ನಡುವೆ ನಡೆದ ಸಂಘರ್ಷದಲ್ಲಿ ನಾಲ್ವರು ಕಾರ್ಯಕರ್ತರು ಮೃತಪಟ್ಟಿದ್ದರು. ಲೋಕಸಭಾ ಚುನಾವಣೆ ವೇಳೆ ವ್ಯಾಪಕ ರಾಜಕೀಯ ಸಂಘರ್ಷಕ್ಕೆ ಸಾಕ್ಷಿಯಾಗಿದ್ದ 24ಪರಗಣ ಜಿಲ್ಲೆಯ ಕಂಕಿನಾರಾದಲ್ಲಿ ಇದೀಗ ಮತ್ತೆ ಸಂಘರ್ಷ ಸಂಭವಿಸಿದೆ. ಇಲ್ಲಿನ ಬುರುಯ್ ಪಾರದಲ್ಲಿ ದುಷ್ಕರ್ಮಿಗಳು ಮನೆ ಮೇಲೆ ಎಸೆದ ಕಚ್ಛಾ ಬಾಂಬ್ ದಾಳಿಯಲ್ಲಿ ಮಹಮದ್ ಮುಖ್ತಾರ್ ಮೃತಪಟ್ಟರೆ, ಹಲವರು ಗಾಯಗೊಂಡಿದ್ದಾರೆ.
ಮೂಲಗಳ ಪ್ರಕಾರ ಮುಖ್ತಾರ್ ಮತ್ತು ಆತನ ನೆರೆ ಮನೆಯವರು ಮನೆಯಂಗಳದಲ್ಲಿ ಕುಳಿತು ಮಾತನಾಡುತ್ತಿದ್ದಾಗ ದುಷ್ಕರ್ಮಿಗಳು ಕಚ್ಚಾಬಾಂಬ್ ಎಸೆದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ನಡೆದ ಸ್ಥಳದಲ್ಲಿ ಇದೀಗ ಪ್ರಕ್ಷುಬ್ದ ಪರಿಸ್ಥಿತಿ ನಿರ್ಮಾಣವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ವ್ಯಾಪಕ ಭದ್ರತೆ ನಿಯೋಜಿಸಲಾಗಿದೆ.