ನವದೆಹಲಿ, ಜೂ 11 (Daijiworld News/MSP): ಜೂನ್ 13 ಮತ್ತು 14ರಂದು ಕಿರ್ಗಿಸ್ತಾನದ ರಾಜಧಾನಿ ಬಿಶ್ಕೆಕ್ ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘದ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿಯವರ ವಿಮಾನಕ್ಕೆ ಪಾಕಿಸ್ತಾನದ ವಾಯುಮಾರ್ಗದಲ್ಲಿ ಸಂಚರಿಸಲು ಭಾರತ ಮಾಡಿದ್ದ ಮನವಿಗೆ ಪಾಕಿಸ್ತಾನ ತಾತ್ವಿಕ ಅನುಮತಿ ನೀಡಿದೆ.
ಕಳೆದ ಫೆಬ್ರವರಿ 26ರಂದು ಪಾಕಿಸ್ತಾನದ ಪ್ರಾಂತ್ಯದೊಳಗಿರುವ ಬಾಲಾಕೋಟ್ ನಲ್ಲಿ ಜೈಶ್ ಇ ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಶಿಬಿರ ತಾಣವನ್ನು ನಾಶಪಡಿಸಲು ಭಾರತೀಯ ವಾಯುಪಡೆ ವಿಮಾನ ಏಕಾಏಕಿ ವಾಯುದಾಳಿ ನಡೆಸಿತ್ತು. ಈ ಘಟನೆ ನಂತರ ಪಾಕಿಸ್ತಾನ ತನ್ನ ಒಟ್ಟು 11 ವಾಯುಮಾರ್ಗಗಳಲ್ಲಿ ದಕ್ಷಿಣ ಪಾಕಿಸ್ತಾನದ ಎರಡು ವಾಯುಮಾರ್ಗಗಳಲ್ಲಿ ಸಂಚಾರಕ್ಕೆ ಮಾತ್ರ ಭಾರತಕ್ಕೆ ಅನುಮತಿ ನೀಡಿತ್ತು. ಬೇರೆಲ್ಲಾ ಮಾರ್ಗಗಳು ಭಾರತದ ಪಾಲಿಗೆ ಮುಚ್ಚಿದ್ದವು.
ಇದೀಗ ಪ್ರಧಾನಿ ಮೋದಿಯವರಿಗೆ ಕಿರ್ಗಿಸ್ತಾನಕ್ಕೆ ಹೋಗಲು ಪಾಕಿಸ್ತಾನದ ವಾಯುಮಾರ್ಗದ ಮೂಲಕ ಹಾರಾಟ ನಡೆಸಲು ಭಾರತ ಮನವಿ ಮಾಡಿತ್ತು. ಅದಕ್ಕೆ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ಸರ್ಕಾರ ತಾತ್ವಿಕ ಅನುಮತಿ ನೀಡಿದೆ.
ಮೇ 21 ರಂದು ಎಸ್ ಸಿ ಓ ರಾಷ್ಟ್ರಗಳ ವಿದೇಶಾಂಗ ಸಚಿವರ ಸಮ್ಮೇಳನದಲ್ಲಿ ಭಾಗವಹಿಸಲು ತೆರಳಿದ್ದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರ ವಿಮಾನಕ್ಕೆ ತಮ್ಮ ವಾಯುಮಾರ್ಗದ ಮೂಲಕ ಸಂಚರಿಸಲು ಅವಕಾಶ ಕಲ್ಪಿಸಿತ್ತು.