ನವದೆಹಲಿ, ಜೂ 11 (Daijiworld News/MSP): ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಭೇಟಿಯಾಗಿದ್ದಾರೆ. ಸೋಮವಾರ ತಡರಾತ್ರಿ ದೆಹಲಿಯಲ್ಲಿ ರಾಹುಲ್ಗಾಂಧಿ ನಿವಾಸಕ್ಕೆ ತೆರಳಿದ ಹೆಚ್ಡಿಡಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿರುದ್ದ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ. ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಈ ಭೇಟಿ ಕುತೂಹಲಕ್ಕೆ ಕಾರಣವಾಗಿದೆ.
ಭೇಟಿಯ ವೇಳೆ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳಿಗೆ ಹೀನಾಯ ಸೋಲಾದ ಬಗ್ಗೆ, ಸದ್ಯದ ರಾಜಕೀಯ ಪರಿಸ್ಥಿತಿ, ಸಚಿವ ಸಂಪುಟ ವಿಸ್ತರಣೆ, ರಾಜ್ಯದ ಕಾಂಗ್ರೆಸ್ ನಾಯಕರ ನಡವಳಿಕೆ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ಇದಲ್ಲದೆ ಕುಮಾರಸ್ವಾಮಿ ಅವರ ಅಭಿಪ್ರಾಯವನ್ನು ವಿರೋಧಿಸುತ್ತಿರುವ ಸಿದ್ದರಾಮಯ್ಯ ಅವರ ನಿಲುವಿಗೆ ದೇವೇಗೌಡರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಇಷ್ಟು ದಿನ ನಡೆದಿದ್ದು ಒಂದೆಡೆ ಇರಲಿ ಆದರೆ, ಇನ್ಮುಂದೆ ಕಾಂಗ್ರೆಸ್ ಮುಖಂಡರ ವರ್ತನೆ ಇದೇ ರೀತಿ ಆದರೆ ಇನ್ನು ಆಡಳಿತ ನಡೆಸೋಕೆ ಸಾಧ್ಯವಿಲ್ಲ ಎಂದು ರಾಹುಲ್ಗಾಂಧಿ ಮುಂದೆ ಬಾಂಬ್ ಸಿಡಿಸಿದ್ದಾರೆ. ಮಾತ್ರವಲ್ಲದೆ ಸಚಿವ ಸಂಪುಟ ವಿಸ್ತರಣೆ ವೇಳೆ, ಇಬ್ಬರು ಪಕ್ಷೇತರ ಶಾಸಕರಿಗೆ ಜೆಡಿಎಸ್ ಖೋಟಾದಡಿ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ ಎಂದು ದೇವೇಗೌಡರು ರಾಹುಲ್ ಗಾಂಧಿಗೆ ಮನವರಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.