ಬೆಳಗಾವಿ, ಜ.21 (DaijiworldNews/AK): ಬಿಜೆಪಿ, ಆರ್ಎಸ್ಎಸ್ ವಿರುದ್ಧ ಹೋರಾಡುವ ಶಕ್ತಿ ಇರುವ ಹೆಣ್ಣು ಪ್ರಿಯಾಂಕಾ ಗಾಂಧಿ ಎಂದು ಎಐಸಿಸಿ ಅಧ್ಯಕ್ಷ K ಖರ್ಗೆ ಅವರು ಕಾಂಗ್ರೆಸ್ ಸಂಸದೆಯ ಗುಣಗಾನ ಮಾಡಿದರು.

1924ರಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಬೆಳಗಾವಿ ಸಾಕ್ಷಿಯಾಗಿತ್ತು. ಈಗ ಅಧಿವೇಶನದ ಶತಮಾನೋತ್ಸವದ ಭಾಗವಾಗಿ ಸಮಾವೇಶ ನಡೆಯುತ್ತಿದ್ದು, ಇದರ ವೇದಿಕೆ ಕಾರ್ಯಕ್ರಮದಲ್ಲಿ ಖರ್ಗೆ ಅವರು ಮಾತನಾಡಿದರು.
ಪ್ರಿಯಾಂಕಾ ಗಾಂಧಿ ಅವರು ನೋಡಲು ಮೆತ್ತಗೆ ಕಾಣಬಹುದು, ಸ್ವಲ್ಪ ಮುಟ್ಟಿನೋಡಿದ್ರೆ ಗೊತ್ತಾಗುತ್ತೆ. ತಂದೆ ಕಳೆದುಕೊಂಡು ಬೆಳೆದು ಬಂದವರು ಪ್ರಿಯಾಂಕಾ, ಎಂದಿಗೂ ತಮ್ಮ ಕೊರತೆ ತೋರಿಸಲಿಲ್ಲ. ಆದ್ರೆ ಮೋದಿ ಅಮಿತ್ ಶಾ ಅವರ ಚಮಚಾಗಳು ಪ್ರಿಯಾಂಕಾಗೆ ಬೈತಾರೆ. ಹಾಗೆ ಮಾತನಾಡೋದಕ್ಕೆ ಮುಂಚೆ, ನಾವು ಮಾಡಿದ್ದನ್ನು ಅವರು ಮಾಡಿತೋರಿಸಲಿ ಎಂದು ಸವಾಲು ಹಾಕಿದರು.
ವಿರೋಧಿ ಬಣದವರು ಕಾಂಗ್ರೆಸ್ ವಿರುದ್ಧ ಟೀಕೆ ಮಾಡ್ತಿದ್ದಾರೆ. 2004 ರಲ್ಲಿ ಸೋನಿಯಾ ಗಾಂಧಿ ದೇಶದ ಪ್ರಧಾನಿಯಾಗಬೇಕಿತ್ತು. ಆದರೆ ಅವರು ಅಧಿಕಾರ ಸ್ವೀಕರಿಸಿದೇ ಮನಮೋಹನ್ ಸಿಂಗ್ಗೆ ತ್ಯಾಗ ಮಾಡಿದರು.
ಮಹಾತ್ಮ ಗಾಂಧೀಜಿಗೆ ಗುಂಡು ಹಾರಿಸಿ ಕೊಂದದ್ದು ಯಾರು? ಆ ಗೋಡ್ಸೆ ಸಾರ್ವಕರ್ ಶಿಷ್ಯ. ಗಾಂಧಿ ಗುಜರಾತ್ನವರೇ ಆದರೂ ಮೋದಿಗೆ ಗೌರವ ಇಲ್ಲ. ಏಕೆಂದರೆ ಮೋದಿ ಪೂಜೆ ಮಾಡೋದು ಗಾಂಧಿಗೆ ಗುಂಡು ಹಾರಿಸಿದ ಗೋಡ್ಸೆಯನ್ನೇ ಎಂದು ಕುಟುಕಿದರು.