ಬೆಳಗಾವಿ,ಜ.21 (DaijiworldNews/AK): ನಿಮ್ಮ ಸಂವಿಧಾನ ಹಾಗೂ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿರುವುದನ್ನು ಸಹಿಸಬೇಡಿ. ಸಂವಿಧಾನ ಯಾವ ರೀತಿ ನಿಮ್ಮನ್ನು ಸುರಕ್ಷಿತವಾಗಿ ಇಟ್ಟಿದೆಯೋ ಅದೇ ರೀತಿ ಸಂವಿಧಾನವನ್ನು ನೀವು ಸುರಕ್ಷಿತವಾಗಿ ಇಡಲು ಸಂಕಲ್ಪ ಮಾಡಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕರೆ ನೀಡಿದರು.

ಬೆಳಗಾವಿಯಲ್ಲಿ ನಡೆದ ಜೈ ಬಾಪು, ಜೈ ಭೀಮ ಮತ್ತು ಜೈ ಸಂವಿಧಾನ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಸಂವಿಧಾನ ಬದಲಾಯಿಸಿ ನಿಮ್ಮ ಅಧಿಕಾರ ಮತ್ತು ಹಕ್ಕುಗಳನ್ನು ದುರ್ಬಲಗೊಳಿಸಲು ಹೊರಟಿರುವ ಬಿಜೆಪಿ ವಿರುದ್ಧ ಹೋರಾಟ ಮಾಡಬೇಕು ಎಂದು ಹೇಳಿದರು.
ರಾಹುಲ್ ಗಾಂಧಿ ಅವರು ಸಂವಿಧಾನದ ರಕ್ಷಣೆಗೆ ಹಗಲು ರಾತ್ರಿ ಹೋರಾಟ ನಡೆಸಿದ್ದಾರೆ. ಇದೇ ಕಾರಣಕ್ಕೆ ಬಿಜೆಪಿಯವರಿಗೆ ರಾಹುಲ್ ಗಾಂದಿ ಕಂಡರೆ ಭಯ. ಅವರ ಮೇಲೆ ದೇಶದ ಬೇರೆ ಬೇರೆ ಕಡೆಗಳಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಇ.ಡಿ ದಾಳಿ ಬೆದರಿಕೆ ಹಾಕಿದ್ದಾರೆ. ಆದರೆ ನಾವು ಇದಕ್ಕೆ ಹೆದರುವುದಿಲ್ಲ .ಸಂವಿಧಾನ ರಕ್ಷಣೆಗೆ ನಾವು ಪ್ರಾಣ ಕೊಡಲು ಸಿದ್ದ ಎಂದು ಪ್ರಿಯಾಂಕಾ ಗಾಂಧಿ ಬಿಜೆಪಿಗೆ ತಿರುಗೇಟು ನೀಡಿದರು.