ಬೆಂಗಳೂರು, ಜೂ 11 (Daijiworld News/MSP): ಅಧಿಕ ಬಡ್ಡಿ ಆಸೆ ತೋರಿಸಿ ಸಾರ್ವಜನಿಕರಿಂದ ಕೋಟ್ಯಂತರ ರೂ. ಹೂಡಿಕೆ ಮಾಡಿಸಿಕೊಂಡು ನಾಪತ್ತೆಯಾಗಿರುವ ಶಿವಾಜಿನಗರದ ಐ.ಎಮ್.ಎ ಜ್ಯುವೆಲ್ಲರಿ ಮಾಲೀಕ ಮನ್ಸೂರ್ ಖಾನ್ ಪತ್ತೆಗಾಗಿ ಪೊಲೀಸರು ನಾಲ್ಕು ತಂಡಗಳನ್ನು ರಚಿಸಿದ್ದಾರೆ. ಈ ಮಧ್ಯೆ ಹೂಡಿಕೆ ಮಾಡಿದ್ದ ಮೂರು ಸಾವಿರಕ್ಕೂ ಹೆಚ್ಚು ಜನರು ಕಂಗಾಲಾಗಿದ್ದು, ತಕ್ಷಣ ಮನ್ಸೂರ್ನನ್ನು ಪತ್ತೆ ಮಾಡಬೇಕು ಎಂದು ಒತ್ತಾಯಿಸಿ ಭಾರೀ ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಗಳವಾರವೂ ಕಚೇರಿ ಬಳಿ ನೂರಾರು ಮಂದಿ ಆಗಮಿಸುತ್ತಿದ್ದು, ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.
ಈ ನಡುವೆ ಐ.ಎಮ್.ಎ ಜ್ಯುವೆಲ್ಲರಿ ಮಾಲೀಕ ಮನ್ಸೂರ್ ಖಾನ್ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿಬಿಐ, ಇಡಿ, ಐಟಿ ಒಳಗೊಂಡಂತೆ ಸಮಗ್ರ ತನಿಖೆ ಆಗಬೇಕೆಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಆಗ್ರಹಿಸಿದ್ದಾರೆ.
ಇನ್ನು ನಾಪತ್ತೆಗೂ ಮುನ್ನ ಮನ್ಸೂರ್ ಅವರ ದ್ವನಿ ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಅದರಲ್ಲಿ “ಶಿವಾಜಿನಗರ ಶಾಸಕ 400 ಕೋಟಿ ರೂ. ಪಡೆದು ಹಣ ವಾಪಸ್ ನೀಡಲಿಲ್ಲ’ ಎಂದು ಆರೋಪಿಸಿದ್ದಾರೆ. ಜತೆಗೆ ರಾಜಕಾರಣಿಗಳು, ಕೇಂದ್ರ ಮತ್ತು ರಾಜ್ಯ ಸರಕಾರದ ಅಧಿಕಾರಿಗಳಿಗೆ ಲಂಚ ಕೊಟ್ಟು ಸಾಕಾಗಿದೆ. ಇದು ನನ್ನ ಕೊನೆಯ ಸಂದೇಶವಾಗಬಹುದು ಎಂದು ಹೇಳಲಾಗಿದೆ.
ಐಎಂಎ ಪ್ರಕರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದವರು ವಂಚನೆಗೊಳಗಾಗಿರುವ ಹಿನ್ನಲೆಯಲ್ಲಿ ಕಾಂಗ್ರಸ್ ಪಕ್ಷದ ಮುಸ್ಲಿಂ ಸಮುದಾಯದ ನಾಯಕರು ಗೃಹ ಸಚಿವ ಎಂ.ಬಿ.ಪಾಟೀಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇಲ್ಲಿಯವರೆಗೆ ಸುಮಾರು 3,500 ಮಂದಿ ತಮಗೆ ವಂಚನೆಯಾಗಿದೆ ಎಂದು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.