ನವದೆಹಲಿ,ಜೂ 11 (Daijiworld News/MSP): ಉತ್ತರ ಪ್ರದೇಶ ಪೊಲೀಸರು ಬಂಧಿಸಿರುವ ಪತ್ರಕರ್ತ ಪ್ರಶಾಂತ್ ಕನೋಜಿಯಾರನ್ನು ತಕ್ಷಣ ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಆಕ್ಷೇಪಾರ್ಹ ವೀಡಿಯೊ ಒಂದನ್ನು ಪ್ರಶಾಂತ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಪತ್ರಕರ್ತ ಪ್ರಶಾಂತ್ ಕನೋಜಿಯಾನನ್ನು ಪೊಲೀಸರು ಬಂಧಿಸಿದ್ದರು. ಪತ್ರಕರ್ತನ ಬಂಧನಕ್ಕೆ ಉತ್ತರ ಪ್ರದೇಶ ಮಾತ್ರವಲ್ಲದೇ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.
ಯೋಗಿ ಆದಿತ್ಯನಾಥ್ರಿಗೆ ಮದುವೆ ಪ್ರಸ್ತಾಪ ಮಾಡಿತ್ತಿದ್ದೇನೆ ಎಂದು ಓರ್ವ ಮಹಿಳೆ ಅವರ ಕಚೇರಿ ಮುಂದೆ ಪತ್ರಕರ್ತರಿಗೆ ತಿಳಿಸಿರುವ ವೀಡಿಯೊವನ್ನು ಪ್ರಶಾಂತ್ ತಮ್ಮ ಟ್ವಿಟರ್ ಮತ್ತು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದರು.
ಬಂಧನ ಪ್ರಶ್ನಿಸಿ ಕನೋಜಿಯಾ ಪತ್ನಿ ಸೋಮವಾರ (ಜೂನ್ 10) ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಪ್ರಶಾಂತ್ ಕನೋಜಿಯಾರನ್ನು ಬಂಧಿಸಿದ್ದು ಯಾಕೆ ಎಂದಿರುವ ಸುಪ್ರೀಂಕೋರ್ಟ್, ಆತ ಏನಾದರೂ ಕೊಲೆ ಮಾಡಿದ್ದಾನೆಯೇ ಎಂದು ಪ್ರಶ್ನಿಸಿದೆ. ನಾಗರಿಕರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡಬಾರದು. ಸಂವಿಧಾನ ನಾಗರೀಕರ ಹಕ್ಕಿಗೆ ಪ್ರಮುಖ್ಯತೆ ನೀಡುತ್ತದೆ.
ಈ ವಿಚಾರವನ್ನು ಆತ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಬಾರದಿತ್ತು. ಆದರೆ ಆತನನ್ನು ನೀವು ಯಾವ ಆಧಾರದ ಮೇಲೆ ಬಂಧಿಸಿದ್ದೀರಿ ಎಂದು ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ, ಅಜಯ್ ರಸ್ತೋಗಿ ನೇತೃತ್ವದ ರಜಾ ಕಾಲದ ನ್ಯಾಯಪೀಠ ಪ್ರಶ್ನಿಸಿದೆ.