ಮಂಡ್ಯ, ಜೂ11(Daijiworld News/SS): ಟೀಕೆಗಳಿಗೆ ಉತ್ತರ ಕೊಡುತ್ತಾ ಕೂರಲು ನಾನು ಸಮಯ ಹರಣ ಮಾಡಲ್ಲ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ರಾಜಕಾರಣ ಮಾಡುವ ಸಮಯವಲ್ಲ. ಟೀಕೆಗಳಿಗೆ ಉತ್ತರ ಕೊಡುತ್ತಾ ಸಮಯ ಹರಣ ಮಾಡಲ್ಲ. ನನ್ನಿಂದ ಯಾವುದೇ ವಿವಾದಾತ್ಮಕ ಹೇಳಿಕೆ ನಿಮಗೆ ಸಿಗುವುದಿಲ್ಲ. ನಾನು ಚುನಾವಣೆ ವೇಳೆ ಯಾರ ಬಗ್ಗೆಯು ಕೀಳಾಗಿ ಮಾತನಾಡಿಲ್ಲ. ಈಗಲೂ ಸಹ ಮಾತನಾಡಲ್ಲ. ನನಗೆ ಜನ ಜವಾಬ್ದಾರಿ ಕೊಟ್ಟಿದ್ದಾರೆ. ಕೆಲಸ ಮಾಡಿಕೊಂಡು ಹೋಗುತ್ತೇನೆ ಎಂದು ಹೇಳಿದರು.
ಮೊದಲ ಬಾರಿ ಸಂಸತ್ ಪ್ರವೇಶ ಮಾಡಿದ ಕ್ಷಣದ ಬಗ್ಗೆ ಮಾತನಾಡಿದ ಅವರು, ಅದೊಂದು ಪ್ರಜಾಪ್ರಭುತ್ವದ ದೇವಾಲಯ. ಅಲ್ಲಿಗೆ ಹೋದಾಗ ಆದಂತಹ ಸಂತಸದ ಕ್ಷಣದ ಬಗ್ಗೆ ಹೇಳಲು ಆಗುತ್ತಿಲ್ಲ ಎಂದು ಹರ್ಷ ವ್ಯಕ್ತಪಡಿಸಿದರು.
ಇದೇ ವೇಳೆ ಬಿಜೆಪಿ ಅಥವಾ ಕಾಂಗ್ರೆಸ್ ಸೇರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿ, ನಾನು ನಾನಾಗೇ ಇರುತ್ತೇನೆ. ಜನರ ಪರವಾಗಿ ಇದ್ದು, ಕೆಲಸ ಮಾಡಿಕೊಂಡು ಹೋಗುತ್ತೇನೆ ಎಂದರು.
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ ವಿಚಾರವಾಗಿ, ನಾನು ಪ್ರತಿಕ್ರಿಯೆ ಕೊಡಲ್ಲ. ಅವರ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಮಂಡ್ಯದಲ್ಲಿ ಈಗಾಗಲೇ ನನ್ನ ಮನೆ ಇದೆ. ಪ್ರತಿ ತಾಲೂಕಿಗೂ ಭೇಟಿ ಕೊಡುತ್ತೇನೆ. ವಾರಕ್ಕೆ ಮೂರು ದಿನ ಮಂಡ್ಯದಲ್ಲೇ ವಾಸ್ತವ್ಯ ಹೂಡುತ್ತೇನೆ ಎಂದು ಭರವಸೆ ನೀಡಿದರು.