ಶ್ರೀನಗರ, ಜೂ11(Daijiworld News/SS): ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಶೋಪಿಯಾನ್ ಜಿಲ್ಲೆಯ ಅವನೀರ್ ಗ್ರಾಮದಲ್ಲಿ ಉಗ್ರರಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಜಂಟಿ ಶೋಧ ಕಾರ್ಯಾಚರಣೆ ನಡೆಸಿದ ಜಮ್ಮು-ಕಾಶ್ಮೀರದ ವಿಶೇಷ ಕಾರ್ಯಾಚರಣೆ ತಂಡ ಮತ್ತು ಸಿಆರ್ ಪಿಎಫ್ ಹಾಗೂ ರಾಷ್ಟ್ರೀಯ ರೈಫಲ್ಸ್ ಪಡೆಗಳು ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ.
ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಉಗ್ರರು ಸ್ವಯಂ ಚಾಲಿತ ಶಸ್ತ್ರಗಳಿಂದ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಭದ್ರತಾ ಪಡೆಗಳು ಕೂಡ ಪ್ರತಿದಾಳಿ ನಡೆಸಿ ಉಗ್ರರನ್ನು ಹತ್ಯೆಗೈದಿದ್ದಾರೆ.
ಸದ್ಯ ಅವನಿರ್ ಪ್ರದೇಶದ ಸುತ್ತಮುತ್ತ ಪ್ರತಿಭಟನೆಯನ್ನು ತಡೆಯಲು ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಮಾತ್ರವಲ್ಲ, ಶೋಧ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಶೋಪಿಯಾನ್'ನಲ್ಲಿ ಎಲ್ಲಾ ಮೊಬೈಲ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.