ಹೊಸದಿಲ್ಲಿ, ಜೂ11(Daijiworld News/SS): ನಾಪತ್ತೆಯಾದ ಭಾರತೀಯ ವಾಯುಪಡೆಯ ವಿಮಾನ ಎಎನ್-32 ಅವಶೇಷಗಳು ಟಾಟೋದ ಈಶಾನ್ಯಕ್ಕೆ ಇರುವ ಲಿಪೋದ ಉತ್ತರ ಭಾಗದ 16 ಕಿ.ಮೀ ದೂರದಲ್ಲಿ ಪತ್ತೆಯಾಗಿವೆ ಎಂದು ವಾಯುಪಡೆ ತಿಳಿಸಿದೆ.
ಜೂನ್ 3ರಂದು ಅರುಣಾಚಲ ಪ್ರದೇಶದ ಜೊರ್ಹಾಟ್ ವಾಯುನೆಲೆಯಿಂದ ಹೊರಟಿದ್ದ 'ಆ್ಯಂಟೊನೊವ್ ಎಎನ್-32' ವಿಮಾನ ಅರ್ಧ ಗಂಟೆಯಲ್ಲಿ ಸಂಪರ್ಕ ಕಡಿದುಕೊಂಡು ನಾಪತ್ತೆಯಾಗಿತ್ತು. ಭೂ ಮಾರ್ಗ ಹಾಗೂ ವಾಯು ಮಾರ್ಗದಲ್ಲಿ ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿದರೂ ಸಂಪರ್ಕ ಕಳೆದುಕೊಂಡಿರುವ ಎಎನ್-32 ವಿಮಾನ ಪತ್ತೆಯಾಗಿರಲಿಲ್ಲ. ವಿಮಾನದಲ್ಲಿದ್ದ 8 ಸಿಬ್ಬಂದಿ ಹಾಗೂ ಐವರು ಭದ್ರತಾ ಪಡೆ ಸೇರಿ 13 ಮಂದಿಯ ಸುಳಿವು ಕೂಡ ದೊರೆತಿರಲಿಲ್ಲ.
ಇದೀಗ ಅವಶೇಷಗಳು ಈಗ ಉತ್ತರ ಲಿಪೋದ ಸುಮಾರು 12,000 ಅಡಿ ಎತ್ತರದ ಪರ್ವತ ಪ್ರದೇಶದಲ್ಲಿ ಪತ್ತೆಯಾಗಿವೆ ಎಂದು ಶೋಧ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಂಐ-17 ಹೆಲಿಕಾಪ್ಟರ್ ಸಿಬ್ಬಂದಿ ತಿಳಿಸಿದ್ದಾರೆ.
ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.