ಬೆಂಗಳೂರು, ಜ.26 (DaijiworldNews/AA): ನಿಜವಾದ ಸ್ವಾತಂತ್ರ್ಯ ಹೋರಾಟಗಾರರನ್ನು ಮೂಲೆ ಗುಂಪು ಮಾಡಿದ್ದು ಕಾಂಗ್ರೆಸ್ ಪಕ್ಷ ಎಂದು ವಿಧಾನ ಪರಿಷತ್ನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನತೆಗೆ ಗಣರಾಜ್ಯೋತ್ಸವದ ಶುಭಾಶಯ ತಿಳಿಸಿದ್ದಾರೆ. ಅಂಬೇಡ್ಕರ್ ಬರೆದ ಸಂವಿಧಾನವನ್ನು ಅರ್ಪಿಸಿಕೊಂಡು 75 ವರ್ಷ ಕಳೆದಿದೆ. ಇಂದು 76ನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. ದೇಶವನ್ನು ಅಭಿವೃದ್ಧಿ ಪಥದಲ್ಲಿ ನಡೆಸಲು ಗಟ್ಟಿಯಾದ ಸಂವಿಧಾನವನ್ನು ನೀಡಿದ ದಿನವನ್ನೇ ಗಣರಾಜ್ಯೋತ್ಸವವಾಗಿ ಆಚರಿಸುತ್ತಿದ್ದೇವೆ. ದೇಶವನ್ನು ಯಾವ ರೀತಿ ನಡೆಸಬೇಕೆನ್ನುವುದು ಸಂವಿಧಾನದಲ್ಲಿದೆ ಎಂದರು.
ಮುಂದುವರೆದು ಬ್ರಿಟಿಷರ ಜೊತೆ ಹೋರಾಟ ಮಾಡಿದ ಹಿಂದುಳಿದ ವರ್ಗಗಳಿಗೆ ಕಾಂಗ್ರೆಸ್ ಅಪಮಾನ ಮಾಡಿದ್ದು ಆಯ್ತು, ಇದೀಗ ನಿಜವಾದ ಸ್ವಾತಂತ್ರ್ಯ ಹೋರಾಟಗಾರರನ್ನು ಮೂಲೆಗೆ ತಳ್ಳಿದೆ. ಸಂವಿಧಾನ ನಿರ್ಮಾಣ ಮಾಡಿದ ದಿನವನ್ನು ನಕಲಿ ಗಾಂಧಿ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ಬಂದ ನಂತರವೂ ಗಾಂಧಿ ಕುಟುಂಬದವರು ಅಧಿಕಾರವನ್ನು ತಮ್ಮಲ್ಲೇ ಇಟ್ಟುಕೊಂಡಿದ್ದಾರೆ. ಕಾಂಗ್ರೆಸ್ನಲ್ಲಿ ಕೇವಲ ಅಧಿಕಾರಿಕ್ಕಾಗಿ ಮಾತ್ರ ನಾನು ಮುಖ್ಯಮಂತ್ರಿ ಎಂದು ಹೇಳುತ್ತಾರೆ. ಈ ಸರ್ಕಾರದಲ್ಲಿ ಲೂಟಿ, ಭ್ರಷ್ಟಾಚಾರ ಮಾತ್ರ ನಿರಂತರವಾಗಿ ನಡೆಯುತ್ತಲೇ ಬರುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.