ಹುಬ್ಬಳ್ಳಿ, ಜ.26 (DaijiworldNews/AA): ರಾಜ್ಯದಲ್ಲಿ ದಿನೇದಿನೇ ಹೆಚ್ಚುತ್ತಿರುವ ಮೈಕ್ರೋ ಫೈನಾನ್ಸ್ ಕಂಪನಿ ಸಿಬ್ಬಂದಿ ಕಿರುಕುಳದಿಂದ ಜನರು ಬೇಸತ್ತಿದ್ದಾರೆ. ಹೀಗಾಗಿ, ಸರ್ಕಾರದಿಂದಲೇ ಜನರಿಗೆ ಸಾಲ ನೀಡುವ ಕೆಲಸವಾಗಬೇಕು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ವಿಚಾರವಾಗಿ ಬಡ ಮತ್ತು ಮಧ್ಯಮವರ್ಗದ ಜನರು ತುರ್ತು ಸಂದರ್ಭದಲ್ಲಿ ಸಾಲ ತೆಗೆದುಕೊಂಡಿರುತ್ತಾರೆ. ಮೈಕ್ರೋ ಫೈನಾನ್ಸ್ ಕಂಪನಿ ಸಿಬ್ಬಂದಿ ಜನಸಾಮಾನ್ಯರಿಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದಾರೆ ಎಂದರು.
ಈ ಬಗ್ಗೆ ನಿನ್ನೆ ಸಿಎಂ ಸಿದ್ದರಾಮಯ್ಯ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಇದ್ದ ಕಾನೂನಿನಲ್ಲೇ ಕ್ರಮಕೈಗೊಳ್ಳಬಹುದಿತ್ತು. ಹೊಸ ಕಾನೂನು ತರುವ ಅವಶ್ಯಕತೆ ಇರಲಿಲ್ಲ. ಸಿಎಂ ಸುಮ್ಮನೇ ತೋರಿಕೆಗೆ ಸಭೆ ನಡೆಸಿದ್ದಾರೆ. ಈ ರೀತಿ ತೋರಿಕೆಗೆ ಸಭೆ ನಡೆಸಿ ಕ್ರಮಕೈಗೊಳ್ಳುವ ಭರವಸೆ ನೀಡುವುದು ಸಮಂಜಸವಲ್ಲ. ಈಗಾಗಲೇ ಇರುವಂತಹ ಕಾನೂನಿನಲ್ಲಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಹೇಳಿದರು.