ಶಿವಮೊಗ್ಗ, ಜೂ 11 (Daijiworld News/SM): 'ಕೆರೆ-ಕಟ್ಟೆಗಳು ಜನರ ಜೀವನಾಡಿಗಳಾಗಿವೆ. ಗ್ರಾಮೀಣ ಪ್ರದೇಶದಲ್ಲಿ ಅವುಗಳನ್ನು ವ್ಯವಸ್ಥಿತವಾಗಿ ರಕ್ಷಿಸಿಕೊಂಡಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗುವುದರಲ್ಲಿ ಸಂಶಯವಿಲ್ಲ. ಆ ಮೂಲಕ ಎಲ್ಲ ಕಾಲದಲ್ಲೂ ನೀರು ಬಳಕೆಗೆ ದೊರೆಯಲಿದೆ' ಎಂದು ಸಾರಿಗೆ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪ್ರಸ್ತುತ ಸಂದರ್ಭದಲ್ಲಿ ಜನರಲ್ಲಿ ನೀರಿನ ಮಹತ್ವದ ಬಗ್ಗೆ ಯಾವುದೇ ಅರಿವಿಲ್ಲ. ಮುಂದಿನ ದಿನಗಳಲ್ಲಿ ನೀರಿನ ಸಂರಕ್ಷಣೆ ಹಾಗೂ ಸದ್ಭಳಕೆ ಕುರಿತು ಯುದ್ಧಗಳೇ ನಡೆದರೆ ಆಶ್ಚರ್ಯವಿಲ್ಲ' ಎಂದರು.
'ನೂರಾರು ಅಡಿ ಕೊಳವೆಬಾವಿ ಕೊರೆದರೂ ಇಂದಿನ ದಿನಗಳಲ್ಲಿ ನೀರು ದೊರೆಯುತ್ತಿಲ್ಲ. ನೀರು ಸಿಗದಿರಲು ಪ್ರಮುಖ ಕಾರಣಗಳು ಏನೆಂಬುವುದರ ಬಗ್ಗೆ ಗಮನಹರಿಸುವುದು ಇಂದಿನ ತುರ್ತು ಅನಿವಾರ್ಯವಾಗಿದೆ. ಇಂದಿನ ದಿನಗಳಲ್ಲಿ ಭೂಮಿಯ ಒಡಲು ಬರಿದಾಗುತ್ತಿದೆ. ಸರಿಯಾದ ಸಮಯಕ್ಕೆ ಮಳೆಯಾಗುತ್ತಿಲ್ಲ. ನಗರೀಕರಣದಿಂದಾಗಿ ಪರಿಸರ ಸಮತೋಲನ ಕಳೆದುಕೊಳ್ಳುತ್ತಿದ್ದು, ಇವುಗಳನ್ನು ಗಮನದಲ್ಲಿರಿಸಿಕೊಂಡು ಪರಿಸರವನ್ನು ಉಳಿಸಿಕೊಂಡು ಮುಂದಿನ ತಲೆಮಾರಿನ ಪೀಳಿಗೆಗೆ ಉಳಿಸಿಕೊಳ್ಳುವ ಅಗತ್ಯವಿದೆ' ಎಂದು ಹೇಳಿದರು.