ಬೆಂಗಳೂರು, ಜೂ12(Daijiworld News/SS): ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ರೈತರ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕ ಬಿ.ಎಸ್ ಯಡಿಯೂರಪ್ಪ ಒತ್ತಾಯಿಸಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ರೈತರ ಬ್ಯಾಂಕ್ ಖಾತೆಗಳಿಂದ ಸಾಲಮನ್ನಾ ಆಗಿರುವ ಹಣ ವಾಪಾಸ್ ಪಡೆದಿರುವುದನ್ನು ಖಂಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕ ಬಿ.ಎಸ್ ಯಡಿಯೂರಪ್ಪ ಸುದ್ದಿಗಾರರೊಂದಿಗೆ ಮಾತನಾಡಿದರು. ಯಾದಗಿರಿಯಲ್ಲಿ ಚುನಾವಣೆಗೂ ಮುನ್ನ ಸಾವಿರಾರು ರೈತರ ಸಾಲಮನ್ನಾ ಮಾಡಿ ಬ್ಯಾಂಕ್'ಗಳಿಗೆ ಹಣ ಜಮಾವಣೆ ಮಾಡಲಾಗಿತ್ತು. ಆದರೆ ಚುನಾವಣೆ ಮುಗಿದ ಕೂಡಲೇ ಆ ಹಣ ವಾಪಸ್ ತೆಗೆದುಕೊಳ್ಳಲಾಗಿದೆ ಎಂದು ದೂರಿದರು.
ಇದು ದೇಶದ ಇತಿಹಾಸದಲ್ಲಿ ಕಂಡು ಕೇಳರಿಯದ ಘಟನೆ. ಹಿಂದೆಂದೂ ಈ ರೀತಿ ನಡೆದಿಲ್ಲ. ರೈತರಿಗೆ ಮುಖ್ಯಮಂತ್ರಿ ದ್ರೋಹ ಬಗೆದಿದ್ದು, ಬ್ಯಾಂಕ್ ಖಾತೆಗಳಿಗೆ ಜಮೆಯಾದ ಹಣ ಯಾಕೆ ವಾಪಸ್ ತೆಗೆದುಕೊಳ್ಳಬೇಕು. ಇಂತಹ ಗಂಭೀರ ಲೋಪ ಎಸಗಿರುವ ಕುಮಾರಸ್ವಾಮಿ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಹೇಳಿದರು.
ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸಾಲಮನ್ನಾ ಮಾಡುವುದಾಗಿ ಹೇಳಿದ್ದ ಕುಮಾರಸ್ವಾಮಿ ಇದೀಗ ರೈತರಿಗೆ ದ್ರೋಹ ಮಾಡಿರುವುದು ಸ್ಪಷ್ಟವಾಗಿದೆ. ಇದೀಗ ಸರ್ಕಾರದ ವಿರುದ್ಧ ರಾಜ್ಯದ ಜನ ಆಕ್ರೋಶಗೊಂಡಿದ್ದಾರೆ ಎಂದು ಹೇಳಿದರು.
ರಾಜ್ಯ ಸರ್ಕಾರ ಜಿಂದಾಲ್'ಗೆ ಭೂಮಿ ಮಾರಾಟ ಮಾಡುವ ತೀರ್ಮಾನ ತೆಗೆದುಕೊಂಡಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ. ಆದರೆ ಭೂಮಿ ಮಾರಾಟಕ್ಕೆ ನಮ್ಮ ವಿರೋಧವಿದೆ. ಈ ಭೂಮಿ ಮಾರಾಟವನ್ನು ಖಂಡಿಸಿ ಹೋರಾಟ ಮಾಡುತ್ತೇವೆ. ಬರ, ಸಾಲಮನ್ನಾ ಹಾಗೂ ಜಿಂದಾಲ್'ಗೆ ಭೂಮಿ ಮಾರಾಟ ವಿಚಾರಗಳನ್ನು ಮುಂದಿಟ್ಟುಕೊಂಡು ಇದೇ 14,15,16 ರಂದು ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.