ನವದೆಹಲಿ, ಜೂ12(Daijiworld News/SS): ವಾಯುಭಾರ ಕುಸಿತದಿಂದ ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ‘ವಾಯು’ ಚಂಡಮಾರುತವು ಗುರುವಾರ (ಜೂ. 13) ಗುಜರಾತ್ ತೀರವನ್ನು ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಮುಂದಿನ 12 ಗಂಟೆಗಳಲ್ಲಿ ‘ವಾಯು’ ಚಂಡಮಾರುತವು ಇನ್ನಷ್ಟು ತೀವ್ರಗೊಂಡು ಗಂಟೆಗೆ 110 ರಿಂದ 120 ಕಿ.ಮೀ. ವೇಗದಲ್ಲಿ ಉತ್ತರ ಭಾಗದತ್ತ ಸಂಚರಿಸಲಿದೆ. ಗುರುವಾರ ಮುಂಜಾನೆ ಗುಜರಾತ್ ತೀರದಲ್ಲಿ ಗಂಟೆಗೆ 135 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಾಯು ಚಂಡಮಾರುತದ ಪರಿಣಾಮ ಸೌರಾಷ್ಟ್ರ ಮತ್ತು ಕಛ್ ಪ್ರದೇಶದಲ್ಲಿ ಬಿರುಗಾಳಿಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಸೂಚಿಸಿದೆ.
ದೇಶದ ಪಶ್ಚಿಮ ಕರಾವಳಿಯುದ್ದಕ್ಕೂ ಗಂಟೆಗೆ 120 ಕಿಮೀ ವೇಗದ ಬಿರುಗಾಳಿ ಬೀಸಲಿದ್ದು, ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ನೆಚ್ಚರಿಕೆ ನೀಡಿದೆ. ಕೇರಳ, ಕರ್ನಾಟಕದ ಕರಾವಳಿ ಜಿಲ್ಲೆಗಳು, ಗುಜರಾತ್ನ ಪೋರ್ಬಂದರ್, ವೆರಾವಲ್ ಮತ್ತು ಮಹುವಾ ಹಾಗೂ ಕೇಂದ್ರಾಡಳಿತ ಪ್ರದೇಶ ದಿಯುಗೆ ವಿಶೇಷ ಮುನ್ಸೂಚನೆ ನೀಡಲಾಗಿದೆ. ಜೂನ್ 13ರಂದು 135 ಕಿ.ಮೀ ವೇಗದೊಂದಿಗೆ ಗಾಳಿ ಹಾಗೂ ಮಳೆ ಬೀಳಲಿದೆ ಎಂದು ಸೂಚನೆ ನೀಡಲಾಗಿದೆ.
ಕಛ್, ದೇವಭೂಮಿ ದ್ವಾರಕಾ, ಪೋರ್ಬಂದರ್, ಜುನಾಗಢ, ದಿಯು, ಗಿರ್, ಸೋಮನಾಥ, ಅಮ್ರೇಲಿ ಮತ್ತು ಭಾವನಗರ ಕರಾವಳಿ ತೀರಗಳಲ್ಲಿ ಭಾರೀ ಮಳೆ ಬೀಳುವುದಲ್ಲದೆ, ಹೆದ್ದೆರೆಗಳು ಅಪ್ಪಳಿಸಲಿವೆ ಎಂದು ಐಎಂಡಿ ತಿಳಿಸಿದೆ.