ಹೊಸದಿಲ್ಲಿ, ಜೂ12(Daijiworld News/SS): ಮುಂದಿನ 24 ಗಂಟೆಗಳಲ್ಲಿ 'ವಾಯು' ಚಂಡಮಾರುತ ಗುಜರಾತ್ ಮತ್ತು ಮಹಾರಾಷ್ಟ್ರ ಕರಾವಳಿಗೆ ಅಪ್ಪಳಿಸಲಿರುವ ಹಿನ್ನೆಲೆಯಲ್ಲಿ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆ ಸಿದ್ಧತೆ ಕುರಿತು ಗೃಹಸಚಿವ ಅಮಿತ್ ಶಾ ಅವರು ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ್ದಾರೆ.
‘ವಾಯು’ ಚಂಡಮಾರುತದ ಮುನ್ಸೂಚನೆ ನೀಡಿದ ಬೆನ್ನಲ್ಲೇ ಉನ್ನತಮಟ್ಟದ ಸಭೆ ನಡೆಸಿರುವ ಕೇಂದ್ರ ಗೃಹ ಸಚಿವರ ಅಮಿತ್ ಶಾ, ನಾಗರಿಕರು ಅಪಾಯಕ್ಕೆ ಸಿಲುಕದಂತೆ ಮುನ್ನೆಚ್ಚರಿಕೆ ಕೈಗೊಳ್ಳಲು ಹಾಗೂ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿರಲು ಸೂಚಿಸಿದ್ದಾರೆ.
ರಾಜ್ಯ ಮತ್ತು ಕೇಂದ್ರ ಸಚಿವರು ಹಾಗೂ ವಿಪತ್ತು ನಿರ್ವಹಣಾ ಸಂಸ್ಥೆಗಳ ಜತೆ ಸಭೆ ನಡೆಸಿದ ಶಾ, ಜನರನ್ನು ಸ್ಥಳಾಂತರಿಸುವ ಹಾಗೂ ಅಗತ್ಯವಿರುವ ಎಲ್ಲಾ ರಕ್ಷಣಾ ಕ್ರಮಗಳನ್ನು ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಹೇಳಿದ್ದಾರೆ. 24x7 ನಿಯಂತ್ರಣ ಕೇಂದ್ರ ಕಾರ್ಯನಿರ್ವಹಿಸಬೇಕು ಹಾಗೂ ಅಗತ್ಯವಿರುವ ಜನರಿಗೆ ಲಭ್ಯವಾಗುವಂತೆ ದೂರವಾಣಿ ಸಂಖ್ಯೆಗಳನ್ನು ನೀಡಲು ಸೂಚಿಸಲಾಗಿದೆ.
ಭಾರತೀಯ ಕರಾವಳಿ ಪಡೆ, ನೌಕಾಪಡೆ, ಸೇನೆ, ವಾಯುಪಡೆ ತಂಡಗಳು ಸನ್ನದ್ಧ ಸ್ಥಿತಿಯಲ್ಲಿದ್ದು, ವಿಮಾನ ಮತ್ತು ಹೆಲಿಕಾಪ್ಟರ್ಗಳ ಮೂಲಕ ಸೇವೆ ಒದಗಿಸಲು ಆದೇಶಿಸಲಾಗಿದೆ.
ರಾಜ್ಯ ಸರಕಾರಗಳು, ಕೇಂದ್ರಾಡಳಿತ ಪ್ರದೇಶ ಸರಕಾರಗಳು ಹಾಗೂ ಕೇಂದ್ರೀಯ ಏಜೆನ್ಸಿಗಳನ್ನು ಇಡೀ ಪ್ರಕ್ರಿಯೆಯಲ್ಲಿ ಒಳಗೊಳಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆ 26 ತಂಡಗಳನ್ನು ಸಜ್ಜುಗೊಳಿಸಿದೆ. ದೋಣಿಗಳು, ಮರ ಕತ್ತರಿಸುವ ಉಪಕರಣಗಳು, ದೂರ ಸಂಪರ್ಕ ಸಲಕರಣೆಗಳು ಎಲ್ಲವನ್ನೂ ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ಅಲ್ಲದೆ ಇನ್ನೂ 10 ಹೆಚ್ಚುವರಿ ತಂಡಗಳನ್ನು ಸನ್ನದ್ಧಗೊಳಿಸಲಾಗಿದೆ ಎಂದು ಗೃಹಸಚಿವಾಲಯದ ಪ್ರಕಟಣೆ ತಿಳಿಸಿದೆ.
ಭಾರತೀಯ ಸೇನೆ, ನೌಕಾಪಡೆ, ವಾಯುಪಡೆ, ಕರಾವಳಿ ರಕ್ಷಣಾ ಪಡೆಗಳು ಕೂಡ ತಮ್ಮೆಲ್ಲಾ ಸಂಪನ್ಮೂಲಗಳನ್ನು ಸಜ್ಜುಗೊಳಿಸಿದ್ದು, ತುರ್ತು ಸ್ಥಿತಿ ಎದುರಿಸಲು ಸನ್ನದ್ಧವಾಗಿವೆ. ಸತತ 24 ಗಂಟೆಗಳ ಕಾಲವೂ ಕಾರ್ಯನಿರ್ವಹಿಸುವ ನಿಯಂತ್ರಣಾ ಕೊಠಡಿಗಳನ್ನು ಆರಂಭಿಸಲು ಗೃಹಸಚಿವರು ನಿರ್ದೇಶನ ನೀಡಿದ್ದಾರೆ.
ಚಂಡಮಾರುತ ಅಪ್ಪಳಿಸಲಿರುವ ಪ್ರದೇಶಗಳಲ್ಲಿ ನೆಲೆಸಿರುವ ಸುಮಾರು ಮೂರು ಲಕ್ಷ ಜನರನ್ನು ಸ್ಥಳಾಂತರಿಸಲು ಗುಜರಾತ್ ಹಾಗೂ ದಿಯು ಆಡಳಿತ ಮುಂದಾಗಿದೆ. ಬುಧವಾರದಿಂದಲೇ (ಜೂನ್ 12) ಸ್ಥಳಾಂತರ ಕಾರ್ಯ ಆರಂಭವಾಗಲಿದೆ. ಇಂಥವರ ತಾತ್ಕಾಲಿಕ ಪುನರ್ವಸತಿಗಾಗಿ 700 ಕೇಂದ್ರಗಳನ್ನು ತೆರೆಯಲಾಗಿದೆ.