ಅಹಮದಾಬಾದ್, ಜೂ12(Daijiworld News/SS): ಲಕ್ಷದ್ವೀಪ ದ್ವೀಪ ಬಳಿಯ ಅರಬ್ಬೀ ಸಮುದ್ರ ಪ್ರದೇಶದಲ್ಲಿ ಎದ್ದಿರುವ ಬಿರುಗಾಳಿಯ ವಾಯುಭಾರ ಕುಸಿತದಿಂದಾಗಿ ಚಂಡಮಾರುತ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಗುಜರಾತ್ನ ಉತ್ತರ ಹಾಗೂ ವಾಯುವ್ಯ ಭಾಗಕ್ಕೆ ಬೀಸುತ್ತಿರುವ ಪರಿಣಾಮ, ಭಾರತದ ಪಶ್ಚಿಮ ಕರಾವಳಿಯಲ್ಲಿ ಭಾರಿ ಮಳೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಈಗಾಗಲೇ, ಗುಜರಾತ್ ಕರಾವಳಿಯಲ್ಲಿ ಸೈಕ್ಲೋನ್ ಅಲರ್ಟ್ ಘೋಷಿಸಲಾಗಿದೆ.
ಜೂ.12ರ ಮಧ್ಯರಾತ್ರಿ ವೇಳೆ 130-140 ಕಿ.ಮೀ. ವೇಗದಲ್ಲಿ ಚಂಡಮಾರುತವು ಉತ್ತರದ ಕಡೆ ಬೀಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಗುಜರಾತ್ ಮೀನುಗಾರರಿಗೆ ಈಗಾಗಲೇ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ. ಈ ಹಿನ್ನಲೆಯಲ್ಲಿ, ಜೂ.12 ಮತ್ತು 13ರಂದು ಎಲ್ಲಾ ಶಾಲಾ - ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಗುಜರಾತಿನ ಕರಾವಳಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಈ ಮಧ್ಯೆ ಫೋನಿ ಚಂಡಮಾರುತವನ್ನು ನಿರ್ವಹಿಸಿದ ಒಡಿಶಾದಿಂದ ವಿಪತ್ತು ನಿರ್ವಹಣೆ ತಂತ್ರಗಳನ್ನು ತಿಳಿದುಕೊಳ್ಳಲು ಗುಜರಾತಿನ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ. ತಲಾ 45 ಸಿಬ್ಬಂದಿಗಳನ್ನು ಹೊಂದಿರುವ ಎನ್ಡಿಆರ್ಎಫ್ನ 26 ತಂಡಗಳನ್ನು ಗುಜರಾತಿನಲ್ಲಿ ಸಕಲ ಉಪಕರಣಗಳೊಂದಿಗೆ ನಿಯೋಜನೆ ಮಾಡಲಾಗಿದೆ.
ವಾಯು ಚಂಡಮಾರುತ ಮುಂದಿನ 24 ಗಂಟೆಗಳಲ್ಲಿ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ. ಗುರುವಾರ ಬೆಳಗ್ಗೆ ಪೋರಬಂದರು ಹಾಗೂ ಮಹುವಾ ಕರಾವಳಿ ಮಧ್ಯೆ ಬರಯವ ವೆರಾವಲ್ ಬಳಿ ಅಪ್ಪಳಿಸಲಿದೆ ಎಂಬ ಮುನ್ಸೂಚನೆ ದೊರೆತಿದೆ.
ಚಂಡಮಾರುತ ಗಾಳಿಯು ಗಂಟೆಗೆ 110-135 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಮಾರುತ ಅಪ್ಪಳಿಸುವ ಹಿನ್ನೆಲೆಯಲ್ಲಿ ಸರ್ಕಾರಿ ಅಧಿಕಾರಿಗಳ ರಜೆಯನ್ನು ಸರ್ಕಾರವು ಕಡಿತಗೊಳಿಸಿದೆ.