ನವದೆಹಲಿ, ಜೂನ್ 12 (Daijiworld News/MSP): ಒಂದು ಬಾರಿ ಲೋಕಸಭೆಯಲ್ಲಿ ಅನುಮೋದನೆಗೊಂಡಿದ್ದ ತ್ರಿವಳಿ ತಲಾಖ್ ನಿಷೇಧ ಮಸೂದೆಯನ್ನ ಮತ್ತೊಂದು ಸಲ ಲೋಕಸಭೆಯಲ್ಲಿ ನೂತನವಾಗಿ ಮತ್ತೆ ಮಂಡಿಸಲು ಕೇಂದ್ರ ಸರ್ಕಾರ ನಿಶ್ಚಯಿಸಿದೆ.
ಈ ಹಿಂದೆ 16ನೇ ಲೋಕಸಭಾ ಅಧಿವೇಶನದಲ್ಲಿ ತ್ರಿವಳಿ ತಲಾಖ್ ನಿಷೇಧ ಕಾಯ್ದೆಯನ್ನ ಮಂಡಿಸಲಾಗಿತ್ತು. ಆದರೆ ಲೋಕಸಭೆಯಲ್ಲಿ ಅನುಮೋದನೆಗೊಂಡ ಮಸೂದೆಯು ರಾಜ್ಯಸಭೆಯಲ್ಲಿ ಅಂಗೀಕಾರಗೊಳ್ಳದೆ ಹಾಗೆಯೇ ಬಾಕಿ ಉಳಿದಿತ್ತು. ಈ ನಡುವೆ ಕಳೆದ ವರ್ಷ ತ್ರಿವಳಿ ತಲಾಖ್ ವಿಚಾರವಾಗಿ ಕೇಂದ್ರ ಸರ್ಕಾರ ಸುಗ್ರಿವಾಜ್ಞೆಯನ್ನು ಹೊರಡಿಸಿತ್ತು. ತ್ರಿವಳಿ ತಲಾಖ್ ಪದ್ಧತಿ ನಿಷೇಧಿಸಲು ಹೊಸ ಮಸೂದೆ ಮಂಡಿಸುವ ಬಗ್ಗೆ ಬುಧವಾರ ನಡೆಯಲಿರುವ ಕೇಂದ್ರ ಸಚಿವ ಸಂಪುಟ ಪರಿಶೀಲಿಸುವ ಸಾಧ್ಯತೆ ಇದೆ.
ಇನ್ನು 16ನೇ ಲೋಕಸಭೆ ಅವಧಿ ಮುಕ್ತಾಯಗೊಂಡು ವಿಸರ್ಜನೆಗೊಂಡ ಕಾರಣದಿಂದ ಮಸೂದೆ ಊರ್ಜಿತವಾಗಿರಲಿಲ್ಲ. ಹೀಗಾಗಿ ಸುಗ್ರಿವಾಜ್ಞೆಯಿಲ್ಲದೇ ರಾಜ್ಯಸಭೆಯಲ್ಲಿ ಮಸೂದೆಯ ಅಂಗೀಕಾರ ಬಾಕಿ ಉಳಿದುಕೊಂಡಿದ್ದರೆ, ತ್ರಿವಳಿ ತಲಾಖ್ ಮುಸೂದೆಯನ್ನು ಮತ್ತೆ ಹೊಸದಾಗಿ ಮಂಡಿಸುವ ಅಗತ್ಯವಿರಲಿಲ್ಲ.
ಇನ್ನೂ ಈ ಸಂಬಂಧ ಇಂದು ಕೇಂದ್ರ ಸಂಪುಟ ನಿರ್ಧಾರ ತೆಗೆದುಕೊಂಡರೆ, ಇದೇ ತಿಂಗಳು 17ರಂದು ನಡೆಯಲಿರುವ ಲೋಕಸಭಾ ಅಧಿವೇಶನದಲ್ಲಿ ತ್ರಿವಳಿ ತಲಾಖ್ ಮಸೂದೆಯನ್ನು ಹೊಸದಾಗಿ ಮಂಡಿಸಲು ಸಿದ್ಧತೆ ನಡೆಸಿದೆ.