ಚಾಮರಾಜನಗರ, ಜೂನ್ 12 (Daijiworld News/MSP): ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ವೀರನ ಪುರದಲ್ಲಿ ದೇವರ ವಿಗ್ರಹ ಧ್ವಂಸಗೊಳಿಸಿದ್ದಾನೆ ಎಂಬ ಆರೋಪದಲ್ಲಿ 38 ರ ಹರೆಯದ ದಲಿತ ವ್ಯಕ್ತಿಯನ್ನು ಬೆತ್ತಲೆಗೊಳಿಸಿ ಥಳಿಸಿದ ಕೃತ್ಯ ತಡವಾಗಿ ಬೆಳಕಿಗೆ ಬಂದಿದ್ದು ಘಟನೆ ಹಿನ್ನಲೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ.
ಗುಂಡ್ಲುಪೇಟೆ ತಾಲೂಕಿನ ಶನೀಶ್ವರ ದೇವಸ್ಥಾನದ ಅರ್ಚಕ ಮತ್ತು ಗ್ರಾಮಸ್ಥ ಹಿಂದುಳಿದ ವರ್ಗದ ವ್ಯಕ್ತಿಯನ್ನು ಬೆತ್ತಲೆಯಾಗಿ ದೇವಸ್ಥಾನದೊಳಗೆ ಮೆರವಣಿಗೆ ಮಾಡಿದ ಘಟನೆ ಕಳೆದ 2 ರಂದು ನಡೆದಿತ್ತು. ಸೋಮವಾರ ಸಾಮಾಜಿಕ ತಾಣಗಳಲ್ಲಿ ಅಮಾನವೀಯ ಹಲ್ಲೆ ನಡೆಸಿದ ದೃಶ್ಯಗಳು ವೈರಲ್ ಆಗಿದ್ದವು. ಆ ಬಳಿಕ ಹಲ್ಲೆಗೊಳಗಾದ ವ್ಯಕ್ತಿಯ ಸಂಬಂದಿಯೊಬ್ಬರು ಗುಂಡ್ಲುಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಘಟನೆ ಬೆಳಕಿಗೆ ಬರುತ್ತಿದ್ದಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಖಂಡಿಸಿದ್ದು, ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಿದ್ದಾರೆ.
‘ಗುಂಡ್ಲಪೇಟೆ ತಾಲ್ಲೂಕಿನಲ್ಲಿ ದಲಿತ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಬೆತ್ತಲೆ ಮೆರವಣಿಗೆ ಮಾಡಿರುವುದು ಅತ್ಯಂತ ಅಮಾನವೀಯ. ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರಿಗೆ ತಿಳಿಸಿದ್ದೇನೆ. ಸಮಾಜದಲ್ಲಿ ಜಾತಿ ವೈಷಮ್ಯ ಇನ್ನೂ ಮುಂದುವರಿದಿರುವುದು ದುರದೃಷ್ಟಕರ. ಇಂಥ ಕೃತ್ಯಗಳನ್ನು ಒಕ್ಕೊರಲಿನಿಂದ ವಿರೋಧಿಸಬೇಕು.’ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಬಂಧಿತ ಅರ್ಚಕ ಶಿವಪ್ಪ ಪ್ರಕಾರ " ದೇವಸ್ಥಾನಕ್ಕೆ ಬರುವ ಸಾಂದರ್ಭದಲ್ಲೇ ಆತನ ಮೈ ಮೇಲೆ ವಸ್ತ್ರಗಳು ಇರಲಿಲ್ಲ. ಹೀಗಾಗಿ ನಾವು ಆತನಿಗೆ ಲುಂಗಿ ಕೊಟ್ಟೆವು. ಆದರೆ ನಿರಾಕರಿಸಿ ದಾಳಿಗೆ ಮುಂದಾದ ಆತ ಮಾನಸಿಕವಾಗಿ ಸ್ಥಿಮಿತ ಹೊಂದಿಲ್ಲ ಎಂದು ಅನಿಸುತ್ತದೆ ಎಂದು ಆರೋಪಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಅರ್ಚಕ ಶಿವಪ್ಪ ಸೇರಿ ಇಬ್ಬರನ್ನು ಪೊಲೀರು ಬಂಧಿಸಿದ್ದು, ಇನ್ನುಳಿದ ನಾಲ್ವರು ಆರೋಪಿಗಳು ತಲೆ ಮರೆಸಿಕೊಂಡಿದ್ದು ಅವರಿಗಾಗಿ ಶೋಧ ನಡೆಸಲಾಗುತ್ತಿದೆ.