ಬೆಂಗಳೂರು, ಜೂನ್ 12 (Daijiworld News/MSP): ಐಎಂಎ ಜುವೆಲ್ಯರಿ ಹಗರಣಕ್ಕೆ ಸಂಬಂಧಿಸಿದಂತೆ ಡಿಐಜಿ ಬಿ.ಆರ್ ರವಿಕಾಂತೇಗೌಡ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಸಿಎಂ ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಎಸ್ಐಟಿ ತಂಡಕ್ಕೆ ಡಿಐಜಿ ರವಿಕಾಂತೇ ಗೌಡ ಅವರು ನೇತೃತ್ವ ವಹಿಸಲಿದ್ದಾರೆ ಮತ್ತು10 ಮಂದಿ ಅಧಿಕಾರಿಗಳು ವಿಶೇಷ ತನಿಖಾ ತಂಡದಲ್ಲಿ ಇರಲಿದ್ದಾರೆ ಎಂದಿದ್ದಾರೆ.
ವಿಶೇಷ ತನಿಖಾ ತಂಡದಲ್ಲಿ ಡಿಸಿಪಿಗಳಾದ ಎಸ್.ಗಿರೀಶ್, ಎಸಿಪಿ ಬಾಲರಾಜು, ಡಿವೈಎಸ್ಪಿಗಳಾದ ಕೆ.ರವಿಶಂಕರ್, ರಾಜಾ ಇಮಾಮ್ ಖಾಸಿಂ, ಅಬ್ದುಲ್ ಖಾದರ್, ಇನ್ಸ್ಪೆಕ್ಟರ್ಗಳಾದ ಸಿ.ಆರ್.ಗೀತಾ, ಎಲ್.ವೈ ರಾಜೇಶ್, ಅಂಜನ್ ಕುಮಾರ್, ತನ್ವೀರ್ ಅಹ್ಮದ್ ಮತ್ತು ಬಿ.ಕೆ.ಶೇಖರ್ ಅವರಿದ್ದಾರೆ.
ಈ ನಡುವೆ ಐಎಂಎ ಕಂಪನಿ ಮಾಲೀಕ ಮೊಹಮ್ಮದ ಮನ್ಸೂರ್ ಖಾನ್ ಮತ್ತೊಂದು ಆಡಿಯೊ ಬಿಡುಗಡೆ ಮಾಡಿದ್ದಾನೆ. ತಾನು ಬೆಂಗಳೂರಲ್ಲಿ ಜೀವಂತವಿದ್ದು ನಾನು ಹಾಗೂ ನನ್ನ ಕುಟುಂಬ ಎಲ್ಲಿಯೂ ಓಡಿ ಹೋಗಿಲ್ಲ. ನನ್ನ ಹಿಂದೆ ದೊಡ್ಡ ಷಡ್ಯಂತ್ರ ನಡೆಸಲಾಗುತ್ತಿದೆ, ನಾನು ಸಾಯುವುದಾಗಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ನನ್ನನ್ನು ಇಲ್ಲಿಂದ ಓಡಿಸಲು ಸಂಚು ರೂಪಿಸಲಾಗುತ್ತಿದೆ. ನಾನು ತೆಗೆದುಕೊಂಡಿರುವ ನ್ಯಾಯವಾದ ದುಡ್ಡು ಎಲ್ಲರಿಗೂ ವಾಪಸ್ ಸಿಗಲಿದೆ. ಶಾಸಕ ರೋಷನ್ ಬೇಗ್, ಶಕೀಲ್ ಅಹಮದ್ ಹಾಗೂ ರಾಹಿಲ್ ನನ್ನನ್ನು ಇಲ್ಲಿಂದ ಓಡಿಸಲು ಸಂಚು ರೂಪಿಸುತ್ತಿದ್ದಾರೆ. ಹೂಡಿಕೆ ಮಾಡಲಾಗಿರುವ ಎಲ್ಲ ಹಣವನ್ನು ನಾನು ಆಭರಣ, ವಜ್ರ, ಆಸ್ಪತ್ರೆ ಹಾಗೂ ರಿಯಲ್ ಎಸ್ಟೆಟ್ ನಲ್ಲಿ ಹೂಡಿಕೆ ಮಾಡಿದ್ದೇನೆ' ಎಂದು ಆಡಿಯೊದಲ್ಲಿ ಹೇಳಿದ್ದಾನೆ.