ಆಗ್ರಾ, ಜೂ12(Daijiworld News/SS): ತಾಜ್ ಮಹಲ್'ಗೆ ಭೇಟಿ ನೀಡುವ ಪ್ರವಾಸಿಗರು ತಾಜ್ ಮಹಲ್ ಪ್ರವೇಶ ಮಾಡಿದ ಮೂರು ಗಂಟೆಯೊಳಗೆ ಅಲ್ಲಿಂದ ಹೊರಗೆ ಹೋಗಬೇಕು. ಇಲ್ಲವಾದಲ್ಲಿ ದಂಡ ಕಟ್ಟಬೇಕಾಗುತ್ತದೆ ಎಂದು ಭಾರತೀಯ ಪುರಾತತ್ವ ಇಲಾಖೆ ಹೊಸ ನಿಯಮದ ಆದೇಶ ಹೊರಡಿಸಿದೆ.
ತಾಜ್ ಮಹಲ್'ಗೆ ಅನಧಿಕೃತ ಪ್ರವೇಶವನ್ನು ನಿಯಂತ್ರಿಸುವ ಸಲುವಾಗಿ ಈ ಹೊಸ ನಿಯಮವನ್ನು ಜಾರಿಗೆ ತಂದಿರುವುದಾಗಿ ಇಲಾಖೆ ಸ್ಪಷ್ಟನೆ ನೀಡಿದೆ.
ಹೊಸ ನಿಯಮದ ಕುರಿತು ಮಾತನಾಡಿರುವ ಇಲಾಖೆಯ ಸೂಪರಿಂಟೆಂಟ್ ಬಸಂತ್ ಕುಮಾರ್, ತಾಜ್ ಮಹಲ್'ನಲ್ಲಿ ಈ ಹಿಂದೆ ಪ್ರವಾಸಿಗರು ಬೆಳಗ್ಗಿನಿಂದ ಸಂಜೆಯವರೆಗೂ ಸಮಯ ಕಳೆಯಬಹುದಿತ್ತು. ಆದರೆ ಈ ವೇಳೆ ತಾಜ್ ಮಹಲ್'ನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತಿತ್ತು. ಅಲ್ಲದೆ ಅನಧಿಕೃತವಾಗಿ ಪ್ರವೇಶದ ಅವಕಾಶವೂ ಇತ್ತು. ಹೀಗಾಗಿ ಇದಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಹೊಸ ನಿಯಮ ಜಾರಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ.
ಹೊಸ ವ್ಯವಸ್ಥೆಯ ಪ್ರಕಾರ, ತಾಜ್ ಮಹಲ್ ಪ್ರವೇಶಿಸುವ ಪ್ರವಾಸಿಗಳು ಕೇವಲ ಮೂರು ಗಂಟೆಗಳು ಮಾತ್ರ ತಾಜ್ ಮಹಲ್ ಒಳಗೆ ಇರಲು ಅವಕಾಶವಿದೆ. ಒಂದುವೇಳೆ ಪ್ರವಾಸಿಗರು 3 ಗಂಟೆಗಿಂತ ಅಧಿಕ ಸಮಯವನ್ನು ತಾಜ್ ಮಹಲ್ ನಲ್ಲಿ ಕಳೆಯಬೇಕೆಂದಿದ್ದರೆ ಅದಕ್ಕಾಗಿ ಅವರು ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಟರ್ನ್ ಸ್ಟೈಲ್ ಗೇಟ್'ಗಳನ್ನು ಪರಿಚಯಿಲಾಗುತ್ತಿದ್ದು, ಪೂರ್ವ ಮತ್ತು ಪಶ್ಚಿಮ ದ್ವಾರಗಳಲ್ಲಿ ಇವುಗಳನ್ನು ಅಳವಡಿಸಲಾಗುತ್ತದೆ. 7 ಗೇಟ್'ಗಳ ಪೈಕಿ 5 ಗೇಟ್ ಗಳು ಎಕ್ಸಿಟ್ ಗೆ ಮೀಸಲಿಡಲಾಗುತ್ತದೆ. ವಿದೇಶಿಗರ ಪ್ರವೇಶಕ್ಕೆ ಪ್ರತ್ಯೇಕ ಗೇಟ್' ಗಳು ಇರಲಿದ್ದು, ಟೋಕನ್'ಗಳ ಮೂಲಕವಷ್ಟೇ ಪ್ರವೇಶ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಈ ನಿಯಮಕ್ಕೆ ಪ್ರವಾಸಿಗರು ವಿರೋಧ ವ್ಯಕ್ತಪಡಿಸಿದ್ದು, ನಾವು ತಾಜ್ ಮಹಲ್'ಗೆ ಸಮಯ ಕಳೆಯಲು ಬರುತ್ತೇವೆ. ಆದರೆ ಪುರಾತತ್ವ ಇಲಾಖೆಯ ಈ ನಿಯಮಗಳಿಂದ ಪ್ರವಾಸಿಗರು ತಾಜ್ ಮಹಲ್'ನಿಂದ ವಿಮುಖರಾಗುವ ಅಪಾಯವಿದೆ. ಕೇವಲ ಮೂರು ಗಂಟೆ ಮಾತ್ರ ಸಮಯಾವಕಾಶ ವಿಧಿಸಿದರೆ ತಾಜ್ ಮಹಲ್'ಗೆ ಆಗಮಿಸಲೂ ಕೂಡ ಪ್ರವಾಸಿಗರು ಎರಡೆರಡು ಬಾರಿ ಯೋಚಿಸುತ್ತಾರೆ. ಇದು ನಿಜಕ್ಕೂ ಪ್ರವಾಸೋದ್ಯಮದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.