ನವದೆಹಲಿ, ಜೂ 12 (Daijiworld News/MSP): ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ 13 ಸಾವಿರ ಕೋಟಿ ರೂ.ಗಳ ಬೃಹತ್ ಹಗರಣಕ್ಕೆ ಸಂಬಂಧಿಸಿ ಭಾರತಕ್ಕೆ ಹಸ್ತಾಂತರಗೊಳ್ಳಲು ದಿನಗಣನೆ ಎದುರಿಸುತ್ತಿರುವ ನೀರವ್ ಮೋದಿಯ ಜಾಮೀನು ಅರ್ಜಿ ವಿಚಾರಣೆ ಬ್ರಿಟನ್ ಹೈಕೋರ್ಟ್ನಲ್ಲಿ ಅಂತ್ಯಗೊಂಡಿದ್ದು, ನಾಲ್ಕನೇ ಬಾರಿಯೂ ಲಂಡನ್ ಹೈಕೋರ್ಟ್ ನೀರವ್ ಮೋದಿಗೆ ಜಾಮೀನು ನಿರಾಕರಿಸಿದೆ. ಹೀಗಾಗಿ ಮತ್ತೆ ನೀರವ್ ಮೋದಿ ಪಶ್ಚಿಮ ಯುರೋಪ್ನ ಅತಿದೊಡ್ಡ ಕಾರಾಗೃಹ ವಾಂಡ್ಸ್ವರ್ಥ್ನಲ್ಲಿ ಜೈಲೇ ಕಾಲಕಳೆಯುವಂತಾಗಿದೆ.
ಭಾರತೀಯ ಕಾಲಮಾನ 2.30ಕ್ಕೆ ನೀರವ್ ಮೋದಿ ಜಾಮೀನು ಕುರಿತಾದ ತೀರ್ಪು ಹೊರಬಿದ್ದಿದ್ದು, ರಾಯಲ್ ಕೋರ್ಟ್ಸ್ ಆಫ್ ಜಸ್ಟಿಸ್ನ ನ್ಯಾಯಮೂರ್ತಿ ಇಂಗ್ರಿಡ್ ಸಿಮ್ಲರ್ ತೀರ್ಪು ನೀಡಿದ್ದಾರೆ. ಕಳೆದ ಮಾರ್ಚ್ 19ರಂದು ಲಂಡನ್ನಲ್ಲಿ ನೀರವ್ ಮೋದಿಯನ್ನು ಬಂಧಿಸಲಾಗಿತ್ತು.
ಭಾರತದೇಶವು ಅವರ ಮೇಲೆ ಅಪರಾದದ ಆರೋಪ ಹೋರಿಸುವ ಮುಂಚಿತವಾಗಿಯೇ ನೀರವ್ ಮೋದಿ 2018ರ ಜನವರಿಯಲ್ಲಿ ಯುನೈಟೆಡ್ ಕಿಂಗ್ಡಮ್ಗೆ ಬಂದಿದ್ದಾರೆ. ಇಲ್ಲಿನ ಕಾನೂನಿಗೆ ನೀರವ್ ಬದ್ಧರಾಗಿದ್ದಾರೆ. ಮತ್ತು ಇಲ್ಲಿ ಉದ್ಯೋಗ ಮಾಡಿಕೊಂಡು, ತೆರಿಗೆ ಪಾವತಿಸುತ್ತಿದ್ದಾರೆ ಎಂದು ನೀರವ್ ಮೋದಿ ಪರ ವಕೀಲರು ವಾದ ಮಂಡಿಸಿ, ಜಾಮೀನು ನೀಡುವಂತೆ ಮನವಿ ಮಾಡಿದ್ದರು. ಆದರೆ, ಈ ವಾದವನ್ನು ತಳ್ಳಿಹಾಕಿದ ನ್ಯಾಯಾಲಯ ಜಾಮೀನು ನಿರಾಕರಿಸಿದೆ.
ಇನ್ನೇನು ಭಾರತಕ್ಕೆ ಹಸ್ತಾಂತರಗೊಳ್ಳಲು ದಿನಗಣನೆ ಎದುರಿಸುತ್ತಿರುವ ನೀರವ್ ಮೋದಿಯನ್ನು ಇರಿಸಲು ಇತ್ತ ಮುಂಬಯಿನ ಅರ್ಥರ್ ರಸ್ತೆಯ ಕಾರಾಗೃಹದಲ್ಲಿ ಬ್ಯಾರಾಕ್ ನಂ.12ರಲ್ಲಿ ಕೊಠಡಿಗಳನ್ನು ಸಜ್ಜು ಮಾಡಲಾಗುತ್ತುದೆ. ಜೈಲಿನ ಕೊಠಡಿಯಲ್ಲಿನ ಸ್ಥಿತಿಗತಿ, ಅನುಕೂಲಗಳ ವಿವರಗಳನ್ನು ಬ್ರಿಟನ್ ಕೋರ್ಟ್ಗೆ ಈಗಾಗಲೇ ಸಲ್ಲಿಸಲಾಗಿದೆ.