ಶಿವಮೊಗ್ಗ, ಜೂ 12 (Daijiworld News/SM): ಐಎಂಎ ಜುವೆಲ್ಲರಿ ಕಂಪನಿಯಲ್ಲಿ ನಡೆದಿದೆ ಎನ್ನಲಾಗಿರುವ ಅವ್ಯವಹಾರದ ಸಮಗ್ರ ತನಿಖೆ ನಡೆಸುವಂತೆ ಶಾಸಕ ಕೆ. ಈಶ್ವರಪ್ಪ ಆಗ್ರಹಿಸಿದ್ದಾರೆ.
ಐಎಂಎ ಕಂಪನಿ ಹಗರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಈಶ್ವರಪ್ಪ ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಇಷ್ಟೊಂದು ದೊಡ್ಡ ಹಗರಣ ನಡೆದರೂ ರಾಜ್ಯ ಸರ್ಕಾರ ಮಾತ್ರ ಮೌನವಾಗಿದೆ. ಅಲ್ಲದೆ ಅಸಹಾಯಕರ ರೀತಿಯಲ್ಲಿ ವರ್ತಿಸುತ್ತಿದೆ. ಇದರ ಪರಿಣಮದಿಂದಾಗಿ ಬಡ ಜನರು ಹಾಗೂ ಮಧ್ಯಮವರ್ಗದವರು ಬೀದಿಗಿಳಿದಿದ್ದಾರೆ. ಮಾತ್ರವಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಇತಿಹಾಸದಲ್ಲೇ ಅತೀ ದೊಡ್ಡ ಹಗರಣ ಇದಾಗಿದೆ. ಇದರಿಂದಾಗಿ ಜನತೆ ಯಾವುದೇ ಸಂಸ್ಥೆಯಲ್ಲೂ ಹೂಡಿಕೆ ಮಾಡಲು ಹಿಂದೆ ಮುಂದೆ ನೋಡುವಂತಾಗಿದೆ. ಹಾಗಾಗಿ ಸರ್ಕಾರ ಕೂಡಲೇ ಕ್ರಮ ತೆಗೆದುಕೊಳ್ಳಲು ಮುಂದಾಗಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.