ಅಹಮದಾಬಾದ್, ಜೂ13(Daijiworld News/SS): 'ವಾಯು' ಚಂಡಮಾರುತ (ಜೂ.13) ಗುರುವಾರ ಮಧ್ಯಾಹ್ನ 1 ಗಂಟೆ ವೇಳೆಗೆ ಗುಜರಾತ್ ತೀರಕ್ಕೆ ಅಪ್ಪಳಿಸಲಿದ್ದು, ಅಪಾಯ ಎದುರಿಸಲು ಭಾರೀ ಸಿದ್ಧತೆಯನ್ನು ಕೈಗೊಳ್ಳಲಾಗಿದೆ.
'ವಾಯು' ಚಂಡಮಾರುತ ಗಂಟೆಗೆ 155-165 ಕಿ.ಮೀ. ವೇಗದಲ್ಲಿ ಪೋರ್ಬಂದರ್ ಮತ್ತು ಮಹುವಾ ನಡುವಿನ ಪ್ರದೇಶದಲ್ಲಿ ಅಪ್ಪಳಿಸಲಿದೆ. ಬಳಿಕ 24 ಗಂಟೆಗಳ ಕಾಲ ಚಂಡಮಾರುತದ ಪ್ರಭಾವ ಮುಂದುವರಿಯಲಿದೆ. ಸೌರಾಷ್ಟ್ರ ಮತ್ತು ಕಛ್ ಪ್ರದೇಶಗಳಲ್ಲಿ ಅತಿ ಹೆಚ್ಚು ತೀವ್ರತೆ ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆಯನ್ನು ನೀಡಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್ಡಿಆರ್ಎಫ್) 52 ತಂಡಗಳನ್ನು ಗುಜರಾತ್ಗೆ ರವಾನಿಸಲಾಗಿದ್ದು, ಪ್ರತಿ ತಂಡದಲ್ಲಿ 45 ಸಿಬ್ಬಂದಿ ಇರುತ್ತಾರೆ. ಅಲ್ಲದೆ ಭಾರತೀಯ ಸೇನಾಪಡೆಯ 10 ತುಕಡಿಗಳನ್ನು ಸನ್ನದ್ಧವಾಗಿರಿಸಲಾಗಿದೆ.
ಮುಳುಗುತಜ್ಞರು ಹಾಗೂ ರಕ್ಷಣಾ ತಂಡಗಳನ್ನು ಸನ್ನದ್ಧವಾಗಿರಿಸಿದ್ದು, ಎಲ್ಲ ಬಗೆಯ ಸಹಕಾರ, ನೆರವು ನೀಡಲು ಪೌರ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಂಬಯಿ ನೌಕಾನೆಲೆಯಲ್ಲಿ ತುರ್ತು ಸ್ಥಿತಿ ಎದುರಿಸಲು ವೈದ್ಯಕೀಯ ತಂಡಗಳು ಸನ್ನದ್ಧವಾಗಿವೆ. ಆಯಕಟ್ಟಿನ ಜಾಗಗಳಲ್ಲಿ 9 ಹೆಲಿಕಾಪ್ಟರ್ಗಳನ್ನು ಸಜ್ಜಾಗಿ ಇರಿಸಲಾಗಿದೆ. 10,000 ಪ್ರವಾಸಿಗರನ್ನು ಸ್ಥಳಾಂತರಿಸಲಾಗಿದೆ ಎಂದು ಗುಜರಾತ್ ಕಂದಾಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಪಂಕಜ್ ಕುಮಾರ್ ತಿಳಿಸಿದ್ದಾರೆ.
ಈಗಾಗಲೇ ವಾಯು ಚಂಡಮಾರುತದ ಪ್ರಭಾವದಿಂದ ಗುಜರಾತ್ ಹಾಗೂ ಮುಂಬಯಿ ಸೇರಿದಂತೆ ಮಹಾರಾಷ್ಟ್ರದ ಕರಾವಳಿ ಪ್ರದೇಶಗಳಲ್ಲಿ ಗುರುವಾರದಿಂದಲೇ ಭಾರಿ ಬಿರುಗಾಳಿ ಸಮೇತ ಮಳೆ ಆರಂಭವಾಗಿದೆ. ಈ ಮಧ್ಯೆ, ಚಂಡಮಾರುತದ ಚಲನವಲನದ ಮೇಲೆ ಕೇಂದ್ರ ಸರಕಾರ ನಿಗಾ ಇರಿಸಿದ್ದು, ಗುಜರಾತ್ ಹಾಗೂ ಇತರೆ ರಾಜ್ಯಗಳ ನೆರವಿಗೆ ಧಾವಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅಭಯ ನೀಡಿದ್ದಾರೆ.