ನವದೆಹಲಿ, ಜೂ13(Daijiworld News/SS): ಅರಬ್ಬೀ ಸಮುದ್ರದಲ್ಲಿ ಎದ್ದಿರುವ ವಾಯು ಚಂಡಮಾರುತದ ಹಿನ್ನೆಲೆಯಲ್ಲಿ ಗೋವಾ ರಾಜ್ಯಕ್ಕೆ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ನೀಡಿದೆ. ಭಾರೀ ಮಳೆಯಾಗುವ ನಿರೀಕ್ಷೆಯಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಐಎಂಡಿ ವಿಜ್ಞಾನಿಗಳು ತಿಳಿಸಿದ್ದಾರೆ. ತೀವ್ರ ರೂಪ ತಳೆದಿರುವ 'ವಾಯು' ಚಂಡಮಾರುತದ ಭೀತಿಗೆ ಈಗಾಗಲೇ ಗುಜರಾತ್ನಲ್ಲಿ 3 ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗಿದೆ.
ಇಂದು ಮದ್ಯಾಹ್ನ ಗುಜರಾತ್ಗೆ ವಾಯು ಚಂಡಮಾರುತ ಪ್ರವೇಶಿಸಲಿದ್ದು, ಈಗಾಗಲೇ ಎಲ್ಲ ರೀತಿಯ ತಯಾರಿ ನಡೆದಿದೆ. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಹಳ್ಳಿಗಳನ್ನು ಖಾಲಿ ಮಾಡಿಲಾಗಿದೆ. ಹವಾಮಾನ ಇಲಾಖೆಯ ಪ್ರಕಾರ, ವಾಯು ಚಂಡಮಾರುತವು ಪೋರ್ಬಂದರುವಿನಿಂದ ಸುಮಾರು 350 ಕಿ.ಮೀ ದೂರ ಇದೆ, ವೆರಾಲ್ನಿಂದ 280 ಕಿ.ಮೀ ದೂರದಲ್ಲಿದೆ ಎಂದು ಹೇಳಲಾಗಿದೆ.
ರಾಷ್ಟ್ರೀಯ ವಿಕೋಪ ನಿರ್ವಹಣಾ ಪಡೆಯ 36 ತಂಡಗಳನ್ನು ನಿಯೋಜಿಸಲಾಗಿದೆ. ಇನ್ನೂ 11 ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಎಸ್ಡಿಆರ್ಎಫ್ನ 9, ಎಸ್ಆರ್ಪಿಯ 14 ತಂಡಗಳು ಹಾಗೂ ನೌಕಾಪಡೆಯ 300 ಕಮಾಂಡೋಗಳನ್ನು ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ.
ಸಮುದ್ರಕ್ಕೆ ಇಳಿಯದಂತೆ ಗೋವಾದ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಗೋವಾದಲ್ಲಿ ಭಾರೀ ಮಳೆ ನಿರೀಕ್ಷಿಸಲಾಗಿದೆ ಎಂದು ರಾಜ್ಯದ ಹವಾಮಾನ ಇಲಾಖೆ ತಿಳಿಸಿದೆ.