ಅರಕಲಗೂಡು, ಜೂ13(Daijiworld News/SS): ಇತಿಹಾಸ ಪ್ರಸಿದ್ಧ ದೇವಾಲಯ ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್ ವತಿಯಿಂದ ಕರ್ನಾಟಕ ರಾಜ್ಯದಲ್ಲಿ ಈವರೆಗೆ 247 ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಲಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕರಾವಳಿ ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಶಿಥಿಲಗೊಂಡಿರುವ ದೇವಾಲಯಗಳನ್ನು ಜೀರ್ಣೋದ್ಧಾರಗೊಳಿಸಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಕಳೆದ 30 ವರ್ಷಗಳಿಂದ ಪ್ರಾಚೀನ ದೇವಾಲಯಗಳನ್ನು ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ ವತಿಯಿಂದ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದರು.
ಈಗಾಗಲೇ ಹಾಸನ ಜಿಲ್ಲೆಯಲ್ಲಿ ಹೆಚ್ಚಿನ ದೇವಾಲಯಗಳಿದ್ದು, ಇಲ್ಲಿಗೆ ಪ್ರಮುಖವಾಗಿ ಗಮನಹರಿಸಲಾಗಿದೆ. ಹಾನಸ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಬೇಲೂರು ಹಳೆಬೀಡಿನಷ್ಟೆ ಸುಂದರವಾದ ದೇವಾಲಯಗಳಿದ್ದು, ಅಗತ್ಯ ನಿರ್ವಹಣೆ ಕಾಣದೆ ಶಿಥಿಲಗೊಂಡಿದೆ. ಇವುಗಳ ರಕ್ಷಣಾ ಕಾರ್ಯ ಹೆಚ್ಚು ನಡೆಯಬೇಕಿದೆ ಎಂದು ತಿಳಿಸಿದರು.
ಇದೇ ವೇಳೆ ಮಾತನಾಡಿದ ಶಾಸಕ ಎಚ್.ಕೆ. ಕುಮಾರಸ್ವಾಮಿ, ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್, ಹೇಮಾವತಿ ಜಲಾಶಯ ಹಾಗೂ ಪ್ರಸಿದ್ಧ ಯೋಗಾನರಸಿಂಹಸ್ವಾಮಿ ದೇವಾಲಯಗಳಿಂದ ಗೊರೂರು ಪ್ರಸಿದ್ದಿ ಪಡೆದಿದೆ. ಹೇಮಾವತಿ ಜಲಾಶಯದ ಮುಂಭಾಗ 100 ಎಕರೆ ಪ್ರದೇಶದಲ್ಲಿ ಸುಂದರ ಉದ್ಯಾನ ನಿರ್ಮಿಸುವ ಪ್ರಸ್ತಾವನೆ ಸರಕಾರದ ಮುಂದೆ ಇರುವುದಾಗಿ ತಿಳಿಸಿದರು.