ನವದೆಹಲಿ, ಜೂ 13(Daijiworld News/MSP): ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಮುಂದುವರಿಯಲಿದ್ದಾರೆ ಎಂದು ಪಕ್ಷದ ವಕ್ತಾರ ರಣದೀಪ್ ಸುರ್ಜೇವಾಲಾ ಬುಧವಾರ ತಿಳಿಸಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ಎ.ಕೆ ಆಂಟನಿ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ಅವರು ಮಾಹಿತಿ ನೀಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿದ ನಂತರ ಸೋಲಿನ ನೈತಿಕ ಹೊಣೆ ಹೊತ್ತು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ರಾಹುಲ್ ಗಾಂಧಿ ಮುಂದಾಗಿದ್ದರು. ಆದರೆ ಅಧ್ಯಕ್ಷ ಸ್ಥಾನ ತ್ಯಜಿಸಬೇಡಿ ಎಂದು ಕಾಂಗ್ರೆಸ್ ಪಕ್ಷದ ನಾಯಕರು ಒತ್ತಾಯಿಸಿದ್ದರು.
ಕಾಂಗ್ರೆಸ್ ನಲ್ಲಿ ಹೊಸ ಅಧ್ಯಕ್ಷರಿಗೆ ಹುಡುಕಾಟ ನಡೆದಿದೆ ಎಂಬ ಸುದ್ದಿ ಮಾಧ್ಯಮಗಳ ಸೃಷ್ಟಿ ಇದರಲ್ಲಿ ಯಾವುದೇ ಸತ್ಯ ಇಲ್ಲ ಎಂದಿದ್ದಾರೆ. ಕಾಂಗ್ರೆಸ್ನ ಹಿರಿಯ ನಾಯಕರು ಬುಧವಾರ ನವದೆಹಲಿಯಲ್ಲಿ ಸಭೆ ಸೇರಿ ಚರ್ಚಿಸಿದ ನಂತರ ಸುರ್ಜೇವಾಲಾ ರಾಹುಲ್ ಅವರ ನಿರ್ಧಾರವನ್ನು ತಿಳಿಸಿದ್ದಾರೆ. ಹಿರಿಯ ನೇತಾರ ಎ.ಕೆ.ಆ್ಯಂಟನಿ ನೇತೃತ್ವದ ಸಭೆಯಲ್ಲಿ ಹರ್ಯಾಣ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಾಗಿ ಪಕ್ಷದ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆದಿದೆ.ಈ ಸಭೆಯಲ್ಲಿ ಅಹಮದ್ ಪಟೇಲ್, ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಆಜಾದ್, ಪಿ. ಚಿದಂಬರಂ, ಕೆ.ಸಿ. ವೇಣುಗೋಪಾಲ್, ಸುರ್ಜೇವಾಲ, ಜೈರಾಂ ರಮೇಶ್ ಮತ್ತು ಆನಂದ ಶರ್ಮಾ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮುಂಬರುವ ಹರಿಯಾಣ , ಜಮ್ಮು ಕಾಶ್ಮೀರ , ಜಾರ್ಖಂಡ್ , ಮಹಾರಾಷ್ಟ್ರ , ವಿಧಾನಸಭೆ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.