ರಾಯ್ಬರೇಲಿ, ಜೂ13(Daijiworld News/SS): ಈ ಬಾರಿ ನಡೆದ ಚುನಾವಣೆಯಲ್ಲಿ ಬಿಜೆಪಿಯವರು ಮತದಾರರನ್ನು ಗೊಂದಲಕ್ಕೆ ಒಳಗಾಗಿಸುವ ಪ್ರಯತ್ನ ಮಾಡಿದ್ದಾರೆ ಎಂದು ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದ ಚುನಾವಣೆ ಪ್ರಕ್ರಿಯೆ ಸೇರಿದಂತೆ ಇವಿಎಂ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಏರಲು, ಆಡಳಿತ ಯಂತ್ರವನ್ನು ಹಿಡಿತದಲ್ಲಿಟ್ಟುಕೊಳ್ಳಲು ನೈತಿಕತೆ ಮತ್ತು ತತ್ವ ಆದರ್ಶಗಳನ್ನು ಬದಿಗೊತ್ತಿರುವುದು ಭಾರತದ ದೊಡ್ಡ ದೌರ್ಭಾಗ್ಯ ಎಂದು ದೂರಿದ್ದಾರೆ.
ಈಗಾಗಲೇ ರಾಷ್ಟ್ರಾದ್ಯಂತ ಚುನಾವಣೆ ಕಾರ್ಯತಂತ್ರದ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ. ನನಗೆ ಈ ವೇಳೆ ಬೆಂಕಿಯಿಲ್ಲದೆ ಹೊಗೆಯಾಡುವುದಿಲ್ಲ ಎಂಬ ಗಾದೆ ಮಾತು ನೆನಪಾಗುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತದಾರರನ್ನು ಗೊಂದಲಕ್ಕೆ ಒಳಗಾಗಿಸುವ ಪ್ರಯತ್ನ ಮಾಡಿದ್ದಾರೆ. ಬಿಜೆಪಿ ಉಪಾಯಗಳು ನೈತಿಕವಾದವೇ ಅಥವಾ ಅಲ್ಲವೇ ಎಂಬುದು ಭಾರತದ ಜನತೆಗೆ ಗೊತ್ತಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ರಾಯ್ಬರೇಲಿ ಮತದಾರರಿಗೆ ಹೃದಯದಿಂದ ಧನ್ಯವಾದ ಸಮರ್ಪಿಸಿದ ಸೋನಿಯಾ ಗಾಂಧಿ, ಈ ಕ್ಷೇತ್ರದ ಮಂದಿ ನನ್ನ ಕುಟುಂಬ ಸದಸ್ಯರು. ನಮ್ಮ ಸಂಬಂಧ ಅತ್ಯಂತ ಬೆಲೆಬಾಳುವಂತದ್ದು ಮತ್ತು ನಿಸ್ವಾರ್ಥದ್ದಾಗಿದೆ ಎಂದು ಹೇಳಿದರು.