ನವದೆಹಲಿ, ಜೂ13(Daijiworld News/SS): 'ವಾಯು' ಅಪ್ಪಳಿಸುವ ಭೀತಿ ಎದುರಿಸುತ್ತಿದ್ದ ಗುಜರಾತ್ ತೀರದ ಮಂದಿ ನಿಟ್ಟುಸಿರು ಬಿಟ್ಟಿದ್ದಾರೆ. ವಾಯು ಚಂಡಮಾರುತ ತನ್ನ ಪಥವನ್ನು ಬದಲಿಸಿರುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಚಂಡಮಾರುತ ಪಥ ಬದಲಿಸಿದೆಯಾದರೂ ಅದರ ಪರಿಣಾಮ ಗುಜರಾತ್ ಕರಾವಳಿ ಪ್ರದೇಶಗಳ ಮೇಲಾಗುತ್ತಿದ್ದು, ಗುಜರಾತ್ ಕರಾವಳಿಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಪ್ರಸ್ತುತ ವೆರವಲ್'ನ ಜಲೇಶ್ವರ್ ನಲ್ಲಿ ಭಾರಿ ಗಾಳಿ ಸಹಿತ ಮಳೆಯಾಗುತ್ತಿದ್ದು, ವಾಯು ಚಂಡಮಾರುತ ಪೋರ್ ಬಂದರ್ ಮತ್ತು ಮಹುವಾ ಬೀಚ್ ಗಳ ನಡುವೆ ಹಾದುಹೋಗಲಿದೆ ಎನ್ನಲಾಗಿದೆ. ವಾಯು ಅಪ್ಪಳಿಸುವ ಹಿನ್ನೆಲೆ ಗುಜರಾತ್ ತೀರದ 10 ಜಿಲ್ಲೆಗಳ 3 ಲಕ್ಷಕ್ಕೂ ಅಧಿಕ ಮಂದಿಯನ್ನು ಗುರುವಾರ ಸ್ಥಳಾಂತರ ಮಾಡಲಾಗಿತ್ತು. ವಾಯು ತನ್ನ ಪಥ ಬದಲಿಸಿದ್ದರು, ಅದರ ಪರಿಣಾಮ ಗುಜರಾತ್ನ ಕರಾವಳಿ ಭಾಗ ಮೇಲೆ ಕೊಂಚ ಮಟ್ಟಿಗೆ ಇದೆ. ಈಗಾಗಲೇ ರಾಜ್ಯದಲ್ಲಿ ಭಾರಿ ಗಾಳಿ, ಮಳೆ ಸುರಿಯುತ್ತಿದ್ದು ಹೈ ಅಲರ್ಟ್ ಘೋಷಿಸಲಾಗಿದೆ.
ರಕ್ಷಣಾ ಪಡೆಗಳು ಸರ್ವ ಸನ್ನದ್ಧಗೊಂಡಿವೆ. ಎಂತಹ ಪರಿಸ್ಥಿತಿಯನ್ನು ಎದುರಿಸಲು ಸಿದ್ಧಗೊಂಡಿವೆ. ಪರಿಸ್ಥಿತಿ ಸಹಜತೆಗೆ ಮರಳುವ ವರೆಗೆ ತೀವ್ರ ನಿಗಾ ಇರಿಸಲಾಗುವುದು ಎಂದು ಹೆಚ್ಚುವರಿ ಮುಖ್ಯಕಾರ್ಯದರ್ಶಿ ಮತ್ತು ಚಂಡಮಾರುತ ರಕ್ಷಣಾ ಪಡೆಯ ಮುಖ್ಯಸ್ಥ ಪಂಕಜ್ ಕುಮಾರ್ ತಿಳಿಸಿದ್ದಾರೆ.
ಈಗಾಗಲೇ ವಾಯು ಭೀತಿ ಎದುರಿಸುತ್ತಿರುವ ಗ್ರಾಮಗಳಿಂದ ಜನರನ್ನು 10 ಕಿ.ಮೀ. ದೂರದ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ.