ಬೆಂಗಳೂರು, ಫೆ.21 (DaijiworldNews/AK): ಅಟಲ್ ಜೀ ಯವರ ಸಂಘಟನೆ, ಹೋರಾಟ ಇವೆಲ್ಲವೂ ಇವತ್ತಿನ ಕಾರ್ಯಕರ್ತರಿಗೆ ಪ್ರೇರಣಾಶಕ್ತಿಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ತಿಳಿಸಿದರು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜೀ ಶತಮಾನೋತ್ಸವ ಕಾರ್ಯಕ್ರಮದ ಪ್ರಯುಕ್ತ ಇಂದು ಅಟಲ್ ಜೀ ಶತಮಾನೋತ್ಸವ ಅಭಿಯಾನದ ಪ್ರಮುಖರು ಬಿ.ಎಸ್.ಯಡಿಯೂರಪ್ಪ ಅವರನ್ನು ಅವರ ನಿವಾಸಕ್ಕೆ ತೆರಳಿ ಭೇಟಿ ಮಾಡಿದರು.
ಯಡಿಯೂರಪ್ಪನವರು ಈ ಸಂದರ್ಭದಲ್ಲಿ ಮಾತನಾಡಿ, “ಕರ್ನಾಟಕ ರಾಜ್ಯಕ್ಕೆ ಬಂದ ಸಂದರ್ಭದಲ್ಲಿ ಅಟಲ್ ಜೀ ಅವರ ಜೊತೆಯಲ್ಲಿ ಹಲವು ಬಾರಿ ಪ್ರವಾಸವನ್ನು ಮಾಡಿದ್ದೇನೆ. ಆ ಪ್ರವಾಸದ ಸಂದರ್ಭದಲ್ಲಿ ಸಂಘಟನೆಯನ್ನು ಬಲಪಡಿಸಲು ಅಟಲ್ ಜೀ ಅವರು ಹಲವಾರು ರೀತಿಯಲ್ಲಿ ಮಾರ್ಗದರ್ಶನ ಮಾಡಿದ್ದರು ಎಂದು ನೆನಪಿಸಿದರು.
ಅಟಲ್ ಜಿ ಅವರ 100ನೇ ಜನ್ಮದಿನದ ಈ ಸುಸಂದರ್ಭದಲ್ಲಿ ಅವರ ವಿಚಾರಧಾರೆಗಳನ್ನು ನಮ್ಮ ಕಾರ್ಯಕರ್ತರು ಅಳವಡಿಸಿಕೊಳ್ಳಬೇಕೆಂಬ ಬಯಕೆ ನನ್ನದಾಗಿದೆ ಎಂದು ನುಡಿದರು. ಅಟಲ್ ಜಿ ಜೊತೆಗೆ ತಮ್ಮ ಒಡನಾಟದ ಹಲವಾರು ಅನುಭವಗಳನ್ನು ಹಂಚಿಕೊಂಡರು.ಈ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪನವರಿಗೆ ಗೌರವ ಸಮರ್ಪಣೆಯನ್ನು ಮಾಡಲಾಯಿತು.